
ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕೇಂದ್ರ ಸರ್ಕಾರ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದಂತೆ ರೈತರ ಸಾಲವನ್ನೂ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡರೆ ರಾಜ್ಯದ ಪಾಲಿನ ಹಣವನ್ನು ನೀಡಲು ಸಿದ್ಧವಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ವಿಧಾನಮಂಡಲದ ಉಭಯ ಸದನಗಳಲ್ಲಿ ಬರ ಪರಿಸ್ಥಿತಿ ಕುರಿತು ನಡೆದ ವಿಶೇಷ ಚರ್ಚೆಗೆ ಉತ್ತರಿಸಿದ ಅವರು, ರೈತರ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದೆ ಒಗ್ಗಟ್ಟಾಗಿ ಮಂಡಿಸುವಂತೆ ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
“ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿ. ರಾಜ್ಯದ ಪಾಲನ್ನು ಭರಿಸಲು ನಾವು ಸಿದ್ಧ. 50:50, 60:40, 70:30 ಯಾವುದೇ ಸೂತ್ರವಾದರೂ ಸರಿ, ಕೇಂದ್ರದಿಂದ ರೈತರಿಗೆ ನೆರವು ಕೊಡಿಸೋಣ. ಬೇಕಿದ್ದರೆ ರೈತರಿಗಾಗಿ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸಿ ಈ ತೀರ್ಮಾನ ಕೈಗೊಳ್ಳಲು ಸಿದ್ಧ,” ಎಂದರು.
ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡೋಣ. ವಿರೋಧ ಪಕ್ಷದ ನಾಯಕರು ಪ್ರಧಾನಮಂತ್ರಿಗಳ ಭೇಟಿಗೆ ಬರುವುದಾಗಿ ಹೇಳಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸಂಬಂಧ ಪ್ರಧಾನಮಂತ್ರಿಗಳ ಭೇಟಿಗೆ ಸಮಯ ಕೋರಿ ಪತ್ರ ಬರೆಯುವುದಾಗಿ ತಿಳಿಸಿದರು.
ರಾಜ್ಯದ ಹಕ್ಕುಗಳಿಗಾಗಿ ಕರ್ನಾಟಕ ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಪಡೆದಿರುವುದನ್ನು ಉಲ್ಲೇಖಿಸಿದ ಅವರು, “ಹಿಂದಿನ ಬಾರಿ ನಾವು ನ್ಯಾಯಾಲಯದ ಮೂಲಕ ಸುಮಾರು 3 ಸಾವಿರ ಕೋಟಿ ರೂ. ಪರಿಹಾರ ಪಡೆದಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯವೊಂದು ಉಚ್ಚತಮ ನ್ಯಾಯಾಲಯದ ಮೂಲಕ ಪರಿಹಾರ ಪಡೆಯುವುದು ಕೂಡ ಇತಿಹಾಸ,” ಎಂದರು.
ಅಭಿವೃದ್ಧಿಗೂ ಮತಕ್ಕೂ ವ್ಯತ್ಯಾಸ
ಸರ್ಕಾರದ ಯೋಜನೆಗಳು ಮತದಾನದ ಆಧಾರದ ಮೇಲೆ ಜಾರಿಯಾಗುವುದಿಲ್ಲ ಎಂದು ಶಿವಕುಮಾರ್ ಹೇಳಿದರು. “ನಮಗೆ 1.36 ಕೋಟಿ ಜನ ಮತ ಹಾಕಿದ್ದಾರೆ. ಆದರೆ 1.60 ಕೋಟಿ ಮನೆಗಳಿಗೆ ಉಚಿತ ವಿದ್ಯುತ್, 4.40 ಕೋಟಿ ಜನರಿಗೆ 10 ಕೆ.ಜಿ. ಅಕ್ಕಿ ಹಾಗೂ 1.21 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ನೆರವು ನೀಡುತ್ತಿದ್ದೇವೆ. ಯೋಜನೆ ಪಡೆಯುವ ಎಲ್ಲರೂ ನಮಗೆ ಮತ ಹಾಕುತ್ತಾರೆಯೇ? ಮಂಗಳೂರು, ಉಡುಪಿಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಲ್ಲ. ಆದರೂ ಎಲ್ಲರಿಗೂ ಯೋಜನೆ ನೀಡುತ್ತಿದ್ದೇವೆ. ಹೀಗಾಗಿ ಮತಕ್ಕೂ ಅಭಿವೃದ್ಧಿ ಕೆಲಸಕ್ಕೂ ವ್ಯತ್ಯಾಸವಿದೆ,” ಎಂದರು.
ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಬೆಳಗಾವಿ, ಕಲಬುರಗಿ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದ ಅವರು, ಮೇವಿನ ಕೊರತೆ ಹಾಗೂ ಹಾಲಿನ ದರದ ವಿಚಾರಗಳನ್ನೂ ಪ್ರಸ್ತಾಪಿಸಿದರು. ನೆರೆಯ ತಮಿಳುನಾಡಿನಲ್ಲಿ ಹಾಲಿನ ದರ ಹೆಚ್ಚಿಸಲಾಗಿದ್ದು, ಗಡಿ ಭಾಗದ ಹಾಲು ಅಲ್ಲಿಗೆ ಹೋಗುತ್ತಿದೆ ಎಂದರು.
ಸಂಘರ್ಷಕ್ಕಿಂತ ಸಹಕಾರ
“ಬರಗಾಲದಲ್ಲಿ ರಾಜಕೀಯದ ಗುದ್ದಾಟ ನನಗೆ ಇಷ್ಟವಿಲ್ಲ. ನನ್ನಿಂದ ತಿದ್ದಿಕೊಳ್ಳಬೇಕಾದ ವಿಚಾರವಿದ್ದರೆ ತಿದ್ದಿಕೊಳ್ಳಲು ಸಿದ್ಧ. ನನಗೆ ಸಂಘರ್ಷ ಮಾಡುವುದಕ್ಕಿಂತ ಪರಸ್ಪರ ಸಹಕಾರದಲ್ಲಿ ಸಾಗಲು ಇಷ್ಟ,” ಎಂದು ಮುಖ್ಯಮಂತ್ರಿ ಹೇಳಿದರು.
ರೈತರಿಗೆ ವಿದ್ಯುತ್ ಪೂರೈಕೆ ಕುರಿತು ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನದತ್ತ ರಾಜ್ಯ ಗಮನಹರಿಸಿದೆ ಎಂದರು. ಪಾವಗಡದಲ್ಲಿ ರೈತರ ಜಮೀನು ಖರೀದಿಸದೆ ಸೌರ ವಿದ್ಯುತ್ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯವು ಪ್ರತಿ ಘಟಕಕ್ಕೆ 22 ರೂ. ನೀಡಿ ವಿದ್ಯುತ್ ಖರೀದಿಸುವ ಪರಿಸ್ಥಿತಿ ಎದುರಿಸುತ್ತಿದೆ ಎಂದರು.
ತುಂಗಭದ್ರಾ ಅಣೆಕಟ್ಟು ಸಮಸ್ಯೆ
ತುಂಗಭದ್ರಾ ಅಣೆಕಟ್ಟಿನಲ್ಲಿ ಸುಮಾರು 30 ಟಿಎಂಸಿ ನೀರಿನಷ್ಟು ಹೂಳು ತುಂಬಿದೆ ಎಂದು ಹೇಳಿದ ಶಿವಕುಮಾರ್, ಸಮಾನಾಂತರ ಜಲಾಶಯ ನಿರ್ಮಾಣ ಹಾಗೂ ಹೂಳು ತೆಗೆಯುವ ಕುರಿತು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮುಖ್ಯಮಂತ್ರಿಗಳು ಚರ್ಚಿಸಿ ಒಮ್ಮತಕ್ಕೆ ಬಂದಿದ್ದನ್ನು ವಿವರಿಸಿದರು.
ಕಸ್ತೂರಿರಂಗನ್ ವರದಿ ವಿಚಾರದಲ್ಲಿಯೂ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಶಾಸಕರು, ರೈತರು ಹಾಗೂ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದರು.
ಹಿಂದಿನ ಸರ್ಕಾರಗಳ ಇತಿಹಾಸ ಕೆದಕುವುದಿಲ್ಲ
ಆರ್ಥಿಕ ಪರಿಸ್ಥಿತಿ ಕುರಿತು ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರ್ಕಾರಗಳ ಅವಧಿಯ ವಿಚಾರಗಳನ್ನು ಕೆದಕುವುದಿಲ್ಲ ಎಂದರು.
“ನನಗೆ ಇತಿಹಾಸ ಓದಲು ಇಷ್ಟವಿಲ್ಲ. ಇತಿಹಾಸ ಸೃಷ್ಟಿ ಮಾಡುವುದು ನನ್ನ ಗುರಿ. ಆರ್ಥಿಕ ಇಲಾಖೆ ಸಲಹೆ ನೀಡುವುದು ಅದರ ಕರ್ತವ್ಯ. ಅವರು ನೀಡಿರುವ ಸಲಹೆಯನ್ನು ಗೌರವಿಸುತ್ತೇನೆ,” ಎಂದರು.
ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕೆ ಸುಮಾರು 70 ಸಾವಿರ ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಿದರು.
‘ಅದಾನಿ ಜತೆ ನೀನು ಕೆಲಸ ಮಾಡಿಲ್ಲವೇ?’
ಹೂಡಿಕೆ ಹಾಗೂ ಉದ್ಯಮಿಗಳ ವಿಚಾರದಲ್ಲಿ ಪ್ರತಿಪಕ್ಷದ ಟೀಕೆಗೆ ತಿರುಗೇಟು ನೀಡಿದ ಶಿವಕುಮಾರ್, “ಅದಾನಿ ನಮ್ಮ ಮನೆಗೆ ಬಂದರೋ ಅಥವಾ ನಾನು ಅವರನ್ನು ಹುಡುಕಿಕೊಂಡು ಹೋಗಿದ್ದೀನಾ? ಅದಾನಿ ಜತೆ ನೀನು ಕೆಲಸ ಮಾಡಿಲ್ಲವೇ? ನಿಮ್ಮ ಕಾಲದಲ್ಲೇ ಅನೇಕ ಕಾಮಗಾರಿಗಳನ್ನು ಮಾಡಿದ್ದೀರಿ,” ಎಂದು ಸುನೀಲ್ ಅವರಿಗೆ ಪ್ರಶ್ನಿಸಿದರು.
ರಾಜ್ಯಕ್ಕೆ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಲು ಪ್ರತ್ಯೇಕ ಇಲಾಖೆ ರಚಿಸಲಾಗುತ್ತಿದೆ ಎಂದರು.
ಬೆಂಗಳೂರಿನ ಆದಾಯ ರಾಜ್ಯದ ಗ್ರಾಮೀಣ ಭಾಗಕ್ಕೂ
ಬೆಂಗಳೂರಿನಲ್ಲಿ ಹೂಡಿಕೆ ಹೆಚ್ಚುತ್ತಿರುವುದರಿಂದ ಉದ್ಯೋಗ ಸೃಷ್ಟಿಯಾಗುತ್ತಿದೆ. ಬೆಂಗಳೂರಿನಿಂದ ಬರುವ ಆದಾಯವನ್ನು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೂ ಬಳಸಲಾಗುತ್ತಿದೆ ಎಂದು ಹೇಳಿದರು.
“ರಾಜ್ಯದ ವಿವಿಧ ಭಾಗಗಳಿಂದ ಜನರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದಾರೆ. ಕಳೆದ 20 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 70 ಲಕ್ಷದಷ್ಟು ಹೆಚ್ಚಾಗಿದೆ. ಇಲ್ಲಿಂದ ಬರುತ್ತಿರುವ ಆದಾಯದ ದೊಡ್ಡ ಪಾಲು ಕೇಂದ್ರ ಸರ್ಕಾರಕ್ಕೆ ಹೋಗುತ್ತಿದೆ. ಇಲ್ಲಿ ಕೂತರೂ ಜಿಎಸ್ಟಿ, ನಿಂತರೂ ಜಿಎಸ್ಟಿ. ರೈತರ ಟ್ರ್ಯಾಕ್ಟರ್‌ಗೂ ಜಿಎಸ್ಟಿ,” ಎಂದು ಹೇಳಿದರು.
ಬರಗಾಲದ ಸಂದರ್ಭದಲ್ಲಿ ರಾಜಕೀಯ ಸಂಘರ್ಷಕ್ಕಿಂತ ರೈತರ ಹಿತಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಬೇಡಿಕೆಗಳನ್ನು ಒಗ್ಗಟ್ಟಾಗಿ ಮಂಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.