
ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಇದರ ಪರಿಣಾಮ ಬಡ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಬೀರುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳು ಕಳೆದರೂ ಜಿಬಿಎ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಸುಮಾರು 23 ಸಾವಿರ ಮಕ್ಕಳಿಗೆ ಶೂ, ಸಾಕ್ಸ್, ಸ್ವೆಟರ್ ಮತ್ತು ಶಾಲಾ ಬ್ಯಾಗ್‌ಗಳನ್ನು ವಿತರಿಸಿಲ್ಲ ಎಂದು ದೂರಿದ್ದಾರೆ.
ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಸತತ ಮೂರು ಬಾರಿ ಟೆಂಡರ್‌ಗಳು ವಿಫಲವಾಗಿವೆ ಎಂದು ಆರೋಪಿಸಿರುವ ಅವರು, ಸರ್ಕಾರದ ನಿರ್ಲಕ್ಷ್ಯದಿಂದ ಬಡ ಮಕ್ಕಳು ಹರಿದ ಬ್ಯಾಗ್ ಹೊತ್ತು, ಬರಿಗಾಲಿನಲ್ಲಿ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ಸರ್ಕಾರಿ ಶಾಲೆಗಳ ಬೆನ್ನೆಲುಬಾಗಿರುವ ಸುಮಾರು 48 ಸಾವಿರ ಅತಿಥಿ ಶಿಕ್ಷಕರಿಗೆ ಕಳೆದ ಮೂರರಿಂದ ನಾಲ್ಕು ತಿಂಗಳಿಂದ ಗೌರವ ಸಂಭಾವನೆ ಪಾವತಿಸಿಲ್ಲ. ಇದರಿಂದ ಶಿಕ್ಷಕರು ಕುಟುಂಬ ನಿರ್ವಹಣೆಗೂ ಪರದಾಡುವಂತಾಗಿದೆ ಎಂದು ಅಶೋಕ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ದುಬಾರಿ ಶೋಕಿ, ಕುಮಾರಕೃಪಾ ನವೀಕರಣ ಹಾಗೂ ಹೆಲಿಕಾಪ್ಟರ್ ಬಳಕೆಗೆ ಹಣವಿದೆ. ಆದರೆ ಬಡ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಬ್ಯಾಗ್ ನೀಡಲು ಮತ್ತು ಶಿಕ್ಷಕರಿಗೆ ಗೌರವ ಸಂಭಾವನೆ ಪಾವತಿಸಲು ಸರ್ಕಾರದ ಬಳಿ ಹಣವಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ತಕ್ಷಣವೇ ಪ್ರತಿಯೊಬ್ಬ ಸರ್ಕಾರಿ ಶಾಲಾ ವಿದ್ಯಾರ್ಥಿಗೂ ಶೂ ಮತ್ತು ಬ್ಯಾಗ್‌ಗಳನ್ನು ವಿತರಿಸಬೇಕು ಹಾಗೂ ಅತಿಥಿ ಶಿಕ್ಷಕರ ಬಾಕಿ ಗೌರವ ಸಂಭಾವನೆಯನ್ನು ಬಿಡುಗಡೆ ಮಾಡಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.