
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ದಲಿತ ಚಳವಳಿಯ ಇತಿಹಾಸ ಹಾಗೂ ಅದರ ಸಾಮಾಜಿಕ ನ್ಯಾಯದ ಹೋರಾಟದ ಹಿನ್ನೆಲೆಯನ್ನು ಅರಿಯದೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ದಲಿತ ಸಂಘರ್ಷ ಸಮಿತಿ ಹಾಗೂ ದಲಿತರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ರಾಜ್ಯ ಸಂಘಟನಾ ಸಂಚಾಲಕ ಎ. ಮಾನಯ್ಯ ಅವರು ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಸುದ್ದಿಗಾರರ ಜೊತೆಯಲ್ಲಿ ಗುರುವಾರ ಮಾತನಾಡಿದ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ವಿಚಾರಧಾರೆಯ ಹಿನ್ನೆಲೆಯಲ್ಲಿ ರೂಪುಗೊಂಡ ದಲಿತ ಸಂಘರ್ಷ ಸಮಿತಿ, ಕರ್ನಾಟಕದ ದಲಿತ ಚಳವಳಿಯ ಇತಿಹಾಸದಲ್ಲಿ ಮಹತ್ವದ ಪಾತ್ರ ವಹಿಸಿದೆ. ದನಿ ಇಲ್ಲದ ಸಮುದಾಯಗಳಿಗೆ ಧ್ವನಿ ನೀಡುವ ಜತೆಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಶೋಷಿತ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿದ ಚಳವಳಿಯಾಗಿದೆ ಎಂದು ಹೇಳಿದರು.
ಜಾತಿ, ಅಸ್ಪೃಶ್ಯತೆ, ಮಹಿಳಾ ಶೋಷಣೆ, ಧಾರ್ಮಿಕ ಕಂದಾಚಾರ ಸೇರಿದಂತೆ ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ರಾಜ್ಯದಾದ್ಯಂತ ಹೋರಾಟ ರೂಪಿಸಿದ ದಲಿತ ಸಂಘರ್ಷ ಸಮಿತಿ, ಸಮಸಮಾಜ ನಿರ್ಮಾಣ ಹಾಗೂ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಗಳಿಗಾಗಿ ನಿರಂತರವಾಗಿ ಧ್ವನಿ ಎತ್ತಿದೆ. ಇಂಥಹಾ ಚಳವಳಿಯ ಇತಿಹಾಸವನ್ನು ತಿಳಿಯದೆ ಅದರ ಕುರಿತು ಟೀಕೆ ಮಾಡುವುದು ಸರಿಯಲ್ಲ ಎಂದು ಮಾನಯ್ಯ ಹೇಳಿದರು.
ಟಿ. ನರಸೀಪುರದಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ನೀಲಿ ಶಾಲಿನ ಕುರಿತು ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆಗಳು ದಲಿತ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿವೆ ಎಂದು ಅವರು ಆರೋಪಿಸಿದರು. ಇಂತಹ ಹೇಳಿಕೆಗಳು ಸಮಾಜದಲ್ಲಿ ಜಾತಿ ಆಧಾರಿತ ಸಂಘರ್ಷಕ್ಕೆ ಕಾರಣವಾಗಬಾರದು. ಸೌಹಾರ್ದಯುತ ವಾತಾವರಣವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್