ಮಕ್ಕಳ ನಡುವಿನ ಅಂತರಕ್ಕೆ ಪರಿಣಾಮಕಾರಿ ಯೋಜನೆ: ಡಾ. ಚಂದ್ರಿಕಾ ಬಿ.ಆರ್
ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಮಕ್ಕಳ ನಡುವಿನ ಅಂತರ ಕಾಯ್ದುಕೊಳ್ಳಲು ಸರ್ಕಾರವು ಹೊಸ ಹೊಸ ವಿಧಾನಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಚುಚ್ಚುಮದ್ದು, ಪಿಪಿಐಯುಸಿಡಿ, ಛಾಯಾ ಮಾತ್ರೆ ಹಾಗೂ ನಿರೋಧ್ ಸೇವೆಗಳು ಲಭ್ಯವಿದ್ದು, ಇದೀಗ ಹೊಸದಾಗಿ ಚರ್ಮದಡಿಯ
ಮಕ್ಕಳ ನಡುವಿನ ಅಂತರಕ್ಕೆ ಪರಿಣಾಮಕಾರಿ ಯೋಜನೆ: ಡಾ. ಚಂದ್ರಿಕಾ ಬಿ.ಆರ್


ಮಕ್ಕಳ ನಡುವಿನ ಅಂತರಕ್ಕೆ ಪರಿಣಾಮಕಾರಿ ಯೋಜನೆ: ಡಾ. ಚಂದ್ರಿಕಾ ಬಿ.ಆರ್


ಬಳ್ಳಾರಿ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಮಕ್ಕಳ ನಡುವಿನ ಅಂತರ ಕಾಯ್ದುಕೊಳ್ಳಲು ಸರ್ಕಾರವು ಹೊಸ ಹೊಸ ವಿಧಾನಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ಚುಚ್ಚುಮದ್ದು, ಪಿಪಿಐಯುಸಿಡಿ, ಛಾಯಾ ಮಾತ್ರೆ ಹಾಗೂ ನಿರೋಧ್ ಸೇವೆಗಳು ಲಭ್ಯವಿದ್ದು, ಇದೀಗ ಹೊಸದಾಗಿ ಚರ್ಮದಡಿಯ ಗರ್ಭನಿರೋಧಕ ಇಂಪ್ಲಾ0ಟ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಕುಟುಂಬ ಕಲ್ಯಾಣ ಕಾರ್ಯಕ್ರಮ ಉಪನಿರ್ದೇಶಕರಾದ ಡಾ. ಚಂದ್ರಿಕಾ ಬಿ.ಆರ್. ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ವಿಭಾಗ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ತಜ್ಞ ವೈದ್ಯರು, ತಾಲೂಕು ಆರೋಗ್ಯಾಧಿಕಾರಿಗಳು, ಆಡಳಿತ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ಗರ್ಭನಿರೋಧಕ ಅಳವಡಿಕೆ ಕುರಿತ ಪುನರ್ಮನನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಕಿಕಡ್ಡಿ ಗಾತ್ರದ ಈ ಸಣ್ಣ, ಹೊಂದಿಕೊಳ್ಳುವ ರಾಡ್ ಅನ್ನು ತರಬೇತಿ ಪಡೆದ ತಜ್ಞ ವೈದ್ಯರು ಮಹಿಳೆಯ ಮೇಲ್ತೋಳಿನ ಚರ್ಮದ ಕೆಳಗೆ ಅಳವಡಿಸುತ್ತಾರೆ. ಒಮ್ಮೆ ಅಳವಡಿಸಿದರೆ ಇದು ಗರ್ಭಧಾರಣೆಯಿಂದ ಸುಮಾರು 3 ವರ್ಷಗಳವರೆಗೆ ರಕ್ಷಣೆ ನೀಡುತ್ತದೆ. ಇದು ಅಂಡಾಶಯದಿ0ದ ಅಂಡಾಣು ಬಿಡುಗಡೆಯಾಗುವುದನ್ನು ತಡೆಯುತ್ತದೆ, ಗರ್ಭಕಂಠದ ಲೋಳೆಯನ್ನು ದಪ್ಪವಾಗಿಸಿ ವೀರ್ಯಾಣುಗಳು ಅಂಡಾಣುವನ್ನು ಸೇರದಂತೆ ತಡೆಯುತ್ತದೆ ಹಾಗೂ ಗರ್ಭಕೋಶದ ಒಳಪದರವನ್ನು ತೆಳುವಾಗಿಸಿ ಫಲವತ್ತಾದ ಅಂಡಾಣು ಅಳವಡಿಕೆಯಾಗುವುದನ್ನು ತಡೆಯುತ್ತದೆ ಎಂದು ತಿಳಿಸಿದರು.

ಇದು ಹಾರ್ಮೋನಿನ, ಹೆಚ್ಚು ಪರಿಣಾಮಕಾರಿಯಾದ ಮತ್ತು ಹಿಮ್ಮುಖಗೊಳಿಸಬಹುದಾದ ವಿಧಾನವಾಗಿದೆ. ಅರ್ಹ ದಂಪತಿಗಳಿಗೆ ಈ ಸೌಲಭ್ಯ ಒದಗಿಸುವುದರಿಂದ ಮಹಿಳೆಯರ ಆರೋಗ್ಯ ರಕ್ಷಣೆಯಾಗುವುದರ ಜೊತೆಗೆ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಅವರು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ಮಾತನಾಡಿ, ಇದು ಅತ್ಯಂತ ಉಪಯುಕ್ತ ತರಬೇತಿಯಾಗಿದ್ದು, ವೈದ್ಯರು ಮತ್ತು ಸಿಬ್ಬಂದಿಗಳು ಇದರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು. ತಮ್ಮ ತಮ್ಮ ಕಾರ್ಯಕ್ಷೇತ್ರಗಳಲ್ಲಿ ಮೊದಲು ಅರ್ಹ ದಂಪತಿಗಳಿಗೆ ಈ ಬಗ್ಗೆ ಸೂಕ್ತ ಅರಿವು ಮೂಡಿಸಿ, ನಂತರ ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕರೆ ನೀಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಎಸ್ಆರ್ಎಚ್ ರಾಜ್ಯಮಟ್ಟದ ಕಾರ್ಯಕ್ರಮ ಅಧಿಕಾರಿ ಮಾಯಾಂಕ್ ಕೆಡೆ, ಐಪಿಇ ಗ್ಲೋಬಲ್ ಲಿಮಿಟೆಡ್ ದೆಹಲಿಯ ಕಾರ್ಯಕ್ರಮ ವ್ಯವಸ್ಥಾಪಕರಾದ ಶೋಭನಾ ಸಿಂಗ್, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಹಾಗೂ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ವೀರೇಂದ್ರ ಕುಮಾರ್ ಕೆ.ಜಿ., ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ. ಹನುಮಂತಪ್ಪ ಸೇರಿದಂತೆ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು, ತಜ್ಞ ವೈದ್ಯರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು, ಜಿಲ್ಲಾ ಮುಖ್ಯ ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿರುಪಾಕ್ಷಿ, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande