
ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಕರ್ನಾಟಕದ ಹಿರಿಯ ಮನೋವೈದ್ಯರು, ಪ್ರಭಾವಿ ವಾಗ್ಮಿಗಳು ಹಾಗೂ ಅಂಕಣಕಾರರಾಗಿದ್ದ ಧಾರವಾಡದ ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ಸಚಿವ ಎಂ.ಬಿ. ಪಾಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಶಕಗಳ ಕಾಲ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದ ಡಾ. ಆನಂದ ಪಾಂಡುರಂಗಿ ಅವರು, ಮನೋವೈದ್ಯಕೀಯ ಸೇವೆಯ ಜೊತೆಗೆ ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಸರಳವಾಗಿ ಜನರಿಗೆ ತಲುಪಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದರು. ವಿಶೇಷವಾಗಿ ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಅವರ ಉಪನ್ಯಾಸಗಳು ಹಾಗೂ ಮಾರ್ಗದರ್ಶನ ಗಮನಾರ್ಹವಾಗಿದ್ದವು ಎಂದು ಎಂ.ಬಿ. ಪಾಟೀಲ್ ಸ್ಮರಿಸಿದ್ದಾರೆ.
ವೈದ್ಯಕೀಯ ವೃತ್ತಿಯೊಂದಿಗೆ ಬರವಣಿಗೆ ಹಾಗೂ ಸಾರ್ವಜನಿಕ ಭಾಷಣದಲ್ಲಿಯೂ ಗುರುತಿಸಿಕೊಂಡಿದ್ದ ಡಾ. ಪಾಂಡುರಂಗಿ ಅವರು, ತಮ್ಮ ವಿಚಾರಧಾರೆ ಮತ್ತು ಅನುಭವದ ಮೂಲಕ ಸಮಾಜದ ವಿವಿಧ ವರ್ಗಗಳಿಗೆ ತಲುಪಿದ್ದರು. ವೈದ್ಯಕೀಯ ಕ್ಷೇತ್ರದ ಜ್ಞಾನವನ್ನು ಸಾರ್ವಜನಿಕ ಬದುಕಿನೊಂದಿಗೆ ಬೆಸೆದು, ಮಾನಸಿಕ ಆರೋಗ್ಯದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದರು.
ಬಿಎಲ್ಡಿಇ ವಿಶ್ವವಿದ್ಯಾಲಯದ ಬಿಒಐ ಸದಸ್ಯರಾಗಿ ಡಾ. ಆನಂದ ಪಾಂಡುರಂಗಿ ಅವರು ಸಲ್ಲಿಸಿದ ಸೇವೆಯನ್ನೂ ಸಚಿವ ಎಂ.ಬಿ. ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಸಂಸ್ಥೆಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಅವರು ನೀಡಿದ ಸಲಹೆ-ಮಾರ್ಗದರ್ಶನ ಸ್ಮರಣೀಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಗದಗದ ತೋಂಟದ ಲಿಂಗೈಕ್ಯ ಸಿದ್ದಲಿಂಗ ಮಹಾಸ್ವಾಮಿಗಳೊಂದಿಗೆ ಡಾ. ಪಾಂಡುರಂಗಿ ಅವರು ಹೊಂದಿದ್ದ ಆತ್ಮೀಯ ಒಡನಾಟವನ್ನೂ ಸಚಿವರು ನೆನಪಿಸಿಕೊಂಡಿದ್ದಾರೆ. ಅವರ ಸಾಮಾಜಿಕ ಹಾಗೂ ಆಧ್ಯಾತ್ಮಿಕ ವಲಯದ ಸಂಪರ್ಕಗಳು ಕೂಡ ಅವರ ವ್ಯಕ್ತಿತ್ವದ ಮತ್ತೊಂದು ಪ್ರಮುಖ ಆಯಾಮವಾಗಿದ್ದವು ಎಂದು ಅವರು ಹೇಳಿದ್ದಾರೆ.
ಡಾ. ಆನಂದ ಪಾಂಡುರಂಗಿ ಅವರು ತಮ್ಮ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯ ಮೂಲಕ ಹಲವು ಗೌರವಗಳಿಗೆ ಪಾತ್ರರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರತಿಷ್ಠಿತ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿದ್ದವು. ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಪರ ಸೇವೆ ಸಲ್ಲಿಸುವುದರ ಜತೆಗೆ ಸಮಾಜಮುಖಿ ಚಿಂತನೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಗಳಲ್ಲಿಯೂ ಅವರು ಗುರುತಿಸಿಕೊಂಡಿದ್ದರು.
ಅವರ ನಿಧನವು ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಜಾಗೃತಿ, ಶಿಕ್ಷಣ ಮತ್ತು ಸಮಾಜಮುಖಿ ಚಿಂತನೆಗೆ ಸಂಬಂಧಿಸಿದ ವಲಯಗಳಿಗೂ ತುಂಬಲಾರದ ನಷ್ಟವಾಗಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
“ಡಾ. ಆನಂದ ಪಾಂಡುರಂಗಿ ಅವರ ಅಗಲಿಕೆ ನೋವು ತಂದಿದೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ. ಕುಟುಂಬವರ್ಗ, ಬಂಧುಬಳಗ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಸಚಿವ ಎಂ.ಬಿ. ಪಾಟೀಲ್ ಅವರು ಪ್ರಕಟಣೆ ಮೂಲಕ ಸಂತಾಪ ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande