
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಭಾರತದ ಬ್ರಿಕ್ಸ್ ಅಧ್ಯಕ್ಷತೆಯ ಹಿನ್ನೆಲೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವಾಲಯವು ಅಕ್ಟೋಬರ್ 12ರಿಂದ 14ರವರೆಗೆ ನವದೆಹಲಿಯಲ್ಲಿ ಬ್ರಿಕ್ಸ್ ರಂಗಭೂಮಿ ಉತ್ಸವ-2026 ಆಯೋಜಿಸಲಿದೆ. ಮೂರು ದಿನಗಳ ಉತ್ಸವದ ಘೋಷವಾಕ್ಯ ‘ಹಂಚಿಕೊಂಡ ಕಥೆಗಳು, ಹಂಚಿಕೊಂಡ ಭವಿಷ್ಯ’ ಎಂಬುದಾಗಿದೆ.
ಉತ್ಸವದಲ್ಲಿ ಬ್ರಿಕ್ಸ್ ಸದಸ್ಯ ಹಾಗೂ ಪಾಲುದಾರ ರಾಷ್ಟ್ರಗಳ 100ಕ್ಕೂ ಹೆಚ್ಚು ರಂಗಭೂಮಿ ಕಲಾವಿದರು, ರಂಗಕರ್ಮಿಗಳು, ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತ, ಥಾಯ್ಲೆಂಡ್, ಇಂಡೋನೇಷ್ಯಾ, ರಷ್ಯಾ, ವಿಯೆಟ್ನಾಂ, ಇರಾನ್, ದಕ್ಷಿಣ ಆಫ್ರಿಕಾ, ಕಜಕಸ್ತಾನ ಮತ್ತು ಇಥಿಯೋಪಿಯಾ ದೇಶಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದ ಬ್ರಿಕ್ಸ್ ಅಧ್ಯಕ್ಷತೆಯಡಿ ನಡೆಯುತ್ತಿರುವ ಪ್ರಮುಖ ಸಾಂಸ್ಕೃತಿಕ ಉಪಕ್ರಮ ಇದಾಗಿದೆ. ರಂಗಭೂಮಿಯ ಮೂಲಕ ವಿವಿಧ ದೇಶಗಳ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಇದು ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.
ಅಕ್ಟೋಬರ್ 12ರಂದು ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಅಭಿಮಂಚ್ ಮತ್ತು ಸಮ್ಮುಖ ಸಭಾಂಗಣಗಳು, ಕಾಮಾನಿ ಸಭಾಂಗಣ, ಎಲ್‌ಟಿಜಿ ಸಭಾಂಗಣ ಹಾಗೂ ಮೇಘದೂತ ರಂಗಮಂದಿರ ಸೇರಿದಂತೆ ಪ್ರಮುಖ ರಂಗಮಂದಿರಗಳಲ್ಲಿ ನಾಟಕ ಪ್ರದರ್ಶನಗಳು ನಡೆಯಲಿವೆ.
ಉತ್ಸವದಲ್ಲಿ ಶಾಸ್ತ್ರೀಯ, ಸಮಕಾಲೀನ ಹಾಗೂ ಪ್ರಯೋಗಾತ್ಮಕ ರಂಗಭೂಮಿಯ ವಿವಿಧ ಪ್ರಕಾರಗಳನ್ನು ಪರಿಚಯಿಸಲಾಗುವುದು. ಭಾರತದ ವತಿಯಿಂದ ಎರಡು ನಾಟಕ ಪ್ರದರ್ಶನಗಳು ನಡೆಯಲಿದ್ದು, ರಷ್ಯಾದ ಎರಡು ರಂಗತಂಡಗಳು ಭಾಗವಹಿಸಲಿವೆ. ಇತರ ದೇಶಗಳೂ ತಮ್ಮ ಭಾಷೆ, ರಂಗಭೂಮಿ ಪರಂಪರೆ ಹಾಗೂ ಸಮಕಾಲೀನ ಸೃಜನಶೀಲ ಅಭಿವ್ಯಕ್ತಿಗಳನ್ನು ಬಿಂಬಿಸುವ ನಾಟಕಗಳನ್ನು ಪ್ರದರ್ಶಿಸಲಿವೆ.
ಉತ್ಸವದ ಅಂಗವಾಗಿ ನಿರ್ದೇಶಕರು, ಕಲಾವಿದರು ಹಾಗೂ ನಿರ್ಮಾಣ ತಂಡಗಳೊಂದಿಗೆ ಸಂವಾದಾತ್ಮಕ ಕಾರ್ಯಾಗಾರಗಳು ಮತ್ತು ಚರ್ಚೆಗಳು ನಡೆಯಲಿವೆ. ಅಭಿನಯ ವಿಧಾನಗಳು, ಪ್ರದರ್ಶನ ಪರಂಪರೆಗಳು, ರಂಗಸಜ್ಜಿಕೆ, ತಾಂತ್ರಿಕ ವಿನ್ಯಾಸ ಹಾಗೂ ಕಲಾತ್ಮಕ ದೃಷ್ಟಿಕೋನ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ.
2026ರ ಆಗಸ್ಟ್‌ನಲ್ಲಿ ನಡೆದ ಬ್ರಿಕ್ಸ್ ಸಂಸ್ಕೃತಿ ಸಚಿವರ ಸಭೆಯಲ್ಲಿ ಅಂಗೀಕರಿಸಲಾದ ಭೋಪಾಲ್ ಘೋಷಣೆಯ ಆಶಯಕ್ಕೆ ಅನುಗುಣವಾಗಿ ಈ ಉತ್ಸವ ಆಯೋಜಿಸಲಾಗುತ್ತಿದೆ. ಸಾಂಸ್ಕೃತಿಕ ಸಹಕಾರ, ಕಲಾವಿದರ ವಿನಿಮಯ ಹಾಗೂ ರಂಗಕರ್ಮಿಗಳ ನಡುವೆ ಬಲವಾದ ಜಾಲ ನಿರ್ಮಾಣಕ್ಕೆ ಘೋಷಣೆಯಲ್ಲಿ ಒತ್ತು ನೀಡಲಾಗಿತ್ತು.
ವಿವಿಧ ಬ್ರಿಕ್ಸ್ ರಾಷ್ಟ್ರಗಳ ಕಲಾವಿದರು ಮತ್ತು ಪ್ರೇಕ್ಷಕರನ್ನು ಒಂದೇ ವೇದಿಕೆಗೆ ತರುವ ಮೂಲಕ ಸಾಂಸ್ಕೃತಿಕ ಸಹಕಾರ ಹಾಗೂ ಜನರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವುದು ಉತ್ಸವದ ಉದ್ದೇಶವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.