ಕೆರೆಯಲ್ಲಿ 15 ವರ್ಷದ ಬಾಲಕನ ಶವ ಪತ್ತೆ; ಸ್ನೇಹಿತನ ವಿರುದ್ಧ ಕೊಲೆ ಆರೋಪ
ಮಂಡ್ಯ, 23 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಕೆರೆಯಲ್ಲಿ 15 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದ್ದು, ಅಪ್ರಾಪ್ತ ಸ್ನೇಹಿತನೇ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿರುವ ಘಟನೆ ಮಂಡ್ಯ ತಾಲ್ಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಮಾಯಪ್ಪನಹಳ್ಳಿಯ ರಾಜು ಹಾಗೂ ಜ್ಯೋತಿ ದಂಪತಿಯ ಪುತ್ರ ದೀಪಕ್ (1
Mandya-15-year-old-boy-found-dead-in-lake-family-alleges-murder-by-minor-friend


ಮಂಡ್ಯ, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕೆರೆಯಲ್ಲಿ 15 ವರ್ಷದ ಬಾಲಕನ ಮೃತದೇಹ ಪತ್ತೆಯಾಗಿದ್ದು, ಅಪ್ರಾಪ್ತ ಸ್ನೇಹಿತನೇ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಆರೋಪಿಸಿರುವ ಘಟನೆ ಮಂಡ್ಯ ತಾಲ್ಲೂಕಿನ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ.

ಮಾಯಪ್ಪನಹಳ್ಳಿಯ ರಾಜು ಹಾಗೂ ಜ್ಯೋತಿ ದಂಪತಿಯ ಪುತ್ರ ದೀಪಕ್ (15) ಮೃತ ಬಾಲಕ. ಸೋಮವಾರ ಅಪ್ರಾಪ್ತ ಸ್ನೇಹಿತನೊಂದಿಗೆ ಆಟವಾಡಲು ತೆರಳಿದ್ದ ದೀಪಕ್ ಸಂಜೆ ಕಳೆದರೂ ಮನೆಗೆ ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಕುಟುಂಬಸ್ಥರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು.

ಬಳಿಕ ಗ್ರಾಮದ ಕೆರೆಯಲ್ಲಿ ದೀಪಕ್ನ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ದೀಪಕ್ ಜೊತೆ ತೆರಳಿದ್ದ ಸ್ನೇಹಿತನನ್ನು ಕುಟುಂಬಸ್ಥರು ವಿಚಾರಿಸಿದಾಗ, ತನ್ನೊಂದಿಗೆ ಬಂದಿರುವುದು ಗೊತ್ತಿಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

ಆದರೆ ದೀಪಕ್ ಹಾಗೂ ಆತನ ಸ್ನೇಹಿತ ಇಬ್ಬರೂ ಕೆರೆ ಬಳಿಗೆ ತೆರಳಿದ್ದನ್ನು ನೋಡಿದ್ದಾಗಿ ದೀಪಕ್ನ ಅಜ್ಜಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಸ್ನೇಹಿತನೇ ದೀಪಕ್ನ ಸಾವಿಗೆ ಕಾರಣನಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

“ದೀಪಕ್ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು” ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಘಟನೆ ಖಂಡಿಸಿ ಮಿಮ್ಸ್ ಶವಾಗಾರದ ಮುಂದೆ ವಿಶ್ವಕರ್ಮ ಸಮುದಾಯದವರು ಪ್ರತಿಭಟನೆ ನಡೆಸಿ, ಬಾಲಕನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಲಾಗುವುದು” ಎಂದು ಅವರು ಭರವಸೆ ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande