
ಕೋಲಾರ, 23 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ನಮಗೆ ಹಳೆಯ ಜನಪದ ಹಾಡುಗಳ ಮಧುರ ನೆನಪುಗಳನ್ನು ಮರುಕಳಿಸಿದೆ. ಜಾನಪದ ಹಾಡುಗಳಲ್ಲಿ ಉತ್ತಮವಾದ ಅರ್ಥ ಹಾಗೂ ಜೀವನ ಮೌಲ್ಯಗಳಿರುತ್ತವೆ. ಮಕ್ಕಳು ಇಂತಹ ಹಾಡುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಪಾಠ-ಪುಸ್ತಕಗಳಷ್ಟೇ ಅಲ್ಲದೆ, ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ಮನಸ್ಸಿಗೆ ಅಪಾರ ಖುಷಿ ನೀಡುತ್ತವೆ. ನಮ್ಮ ಶಾಲೆಯ ಮಕ್ಕಳು ಈ ಕಾರ್ಯಕ್ರಮದಿಂದ ಬಹಳ ಆನಂದಪಟ್ಟಿದ್ದಾರೆ, ಎಂದು ಹರ್ಷ ವ್ಯಕ್ತಪಡಿಸಿ, ಆಯೋಜಕರಿಗೆ ಧನ್ಯವಾದ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಸುಮ.ಸಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೋಲಾರ ಹಾಗೂ ಸುವರ್ಣ ಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಆಯೋಜಿಸಲಾದ ತಾಲ್ಲೂಕಿನ ಛತ್ರಕೋಡಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉಚಿತ ಜನಪದ ಗಾಯನ' ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸುವರ್ಣ ಭೂಮಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಕುಡುವನಹಳ್ಳಿ ಗಣೇಶಪ್ಪ ಮಾತನಾಡಿ ನಾವು ನಮ್ಮ ನಾಡಿನ ಹಳೆಯ ಜನಪದ ಸಂಸ್ಕೃತಿಯನ್ನು ಮರೆಯುತ್ತಿದ್ದು, ಇಂದಿನ ವಿದ್ಯಾರ್ಥಿಗಳಲ್ಲಿ ಜಾನಪದ ಕಲೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜನಪದ ಹಾಡುಗಳು ಬದುಕಿನ ಮೌಲ್ಯಗಳನ್ನು ಕಲಿಸುವುದರ ಜೊತೆಗೆ ನಮ್ಮ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಇಂತಹ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ಆಯೋಜನೆಗೊಳ್ಳಬೇಕು, ಎಂದು ಅಭಿಪ್ರಾಯಪಟ್ಟರು.
ಸಹ ಶಿಕ್ಷಕ ಕುಸುಮ.ಕೆ ಮಾತನಾಡಿ, ಜಾನಪದದಲ್ಲಿ ಉತ್ತಮ ಅರ್ಥವಿರುತ್ತದೆ ಮತ್ತು ಮಕ್ಕಳು ಇಂತಹ ಹಾಡುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಪಾಠದ ಜೊತೆಗೆ ಇಂತಹ ಗಾಯನಗಳು ಮಕ್ಕಳ ಮನಸ್ಸಿಗೆ ಖುಷಿ ನೀಡಿವೆ ಎಂದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕಿ ವೀಣಾ, ಸಮಾಜ ಸೇವಕರಾದ ನಾಗರಾಜ್ ಹಾಗೂ 'ಈ ನೆಲ ಈ ಜಲ' ವೆಂಕಟಾಚಲಪತಿ ಅವರು ವಿದ್ಯಾರ್ಥಿಗಳಿಗೆ ಸುಂದರವಾದ ಜನಪದ ಹಾಡುಗಳನ್ನು ಹಾಡುವ ಮೂಲಕ ರಸದೌತಣ ನೀಡಿದರು. ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್