
ಬೆಂಗಳೂರು, 22 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಸ್ತಿ ದಾಖಲೆಗಳ ನಿರ್ವಹಣೆಯನ್ನು ಮತ್ತಷ್ಟು ಸರಳ, ವೇಗದ, ಪಾರದರ್ಶಕ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ‘ಇ-ಆಸ್ತಿ 2.0’ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಅಭಿವೃದ್ಧಿಪಡಿಸಿರುವ ‘ಇ-ಆಸ್ತಿ 2.0’ ವ್ಯವಸ್ಥೆಯನ್ನು ಸಚಿವ ಕೃಷ್ಣ ಬೈರೇಗೌಡ ಅವರು ಮಂಗಳವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 35 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ 23–24 ಲಕ್ಷಕ್ಕೂ ಹೆಚ್ಚು ಆಸ್ತಿ ದಾಖಲೆಗಳನ್ನು ಈಗಾಗಲೇ ಗಣಕೀಕರಣಗೊಳಿಸಿ ಡ್ರಾಫ್ಟ್ ಖಾತಾಗಳನ್ನು ವಿತರಿಸಲಾಗಿದೆ. ಸುಮಾರು 11 ಲಕ್ಷ ಆಸ್ತಿ ಮಾಲೀಕರು ಅಂತಿಮ ಇ-ಖಾತಾ ಪಡೆದುಕೊಂಡಿದ್ದಾರೆ. ಉಳಿದವರು ಅಗತ್ಯ ಮಾಹಿತಿಯನ್ನು ಸಲ್ಲಿಸಿ ಅಂತಿಮ ಇ-ಖಾತಾ ಪಡೆಯಬಹುದು ಎಂದು ತಿಳಿಸಿದರು.
ಹಳೆಯ ಕಾಲದಲ್ಲಿ ಆಸ್ತಿ ದಾಖಲೆಗಳು ಕಾಗದದ ರೂಪದಲ್ಲಿದ್ದ ಕಾರಣ ತಿದ್ದುಪಡಿ ಹಾಗೂ ಬದಲಾವಣೆಗಳಿಗೆ ಅವಕಾಶವಿತ್ತು. ಭೂಮಿ ದಾಖಲೆಗಳ ಗಣಕೀಕರಣದಿಂದ ಮಧ್ಯವರ್ತಿಗಳ ಹಸ್ತಕ್ಷೇಪ ಹಾಗೂ ಸಾರ್ವಜನಿಕರಿಗೆ ಆಗುತ್ತಿದ್ದ ತೊಂದರೆಗಳನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಇದೇ ಉದ್ದೇಶದಿಂದ ಇ-ಖಾತಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು ಎಂದು ಹೇಳಿದರು.
ರಾಷ್ಟ್ರೀಯ ಇ-ಆಡಳಿತ ಚಿನ್ನದ ಪ್ರಶಸ್ತಿ: ತಂತ್ರಜ್ಞಾನ ಆಧಾರಿತ ಹಾಗೂ ನಾಗರಿಕ ಕೇಂದ್ರಿತ ಸೇವೆಗಾಗಿ ಇ-ಖಾತಾ ವ್ಯವಸ್ಥೆಗೆ ರಾಷ್ಟ್ರೀಯ ಇ-ಆಡಳಿತ 2025 ಚಿನ್ನದ ಪ್ರಶಸ್ತಿ ಲಭಿಸಿದೆ. ವ್ಯವಸ್ಥೆಯಿಂದ ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ಶೋಷಣೆ, ಭ್ರಷ್ಟಾಚಾರ ಹಾಗೂ ಹಲವು ವಿವಾದಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದು ಸಚಿವರು ಹೇಳಿದರು.
ಹಿಂದಿನ ವ್ಯವಸ್ಥೆಯಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡುವುದು ಸೇರಿದಂತೆ ಕೆಲವು ಪ್ರಕ್ರಿಯೆಗಳು ನಾಗರಿಕರಿಗೆ ಕಷ್ಟಕರವಾಗಿದ್ದವು. ಈ ಹಿನ್ನೆಲೆಯಲ್ಲಿ ಬಳಕೆದಾರರ ಅನುಭವವನ್ನು ಸುಧಾರಿಸಿ, ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಿ ‘ಇ-ಆಸ್ತಿ 2.0’ ರೂಪಿಸಲಾಗಿದೆ ಎಂದರು.
ಖಾತಾದಲ್ಲಿ ಹೆಸರು ತಪ್ಪಾಗಿರುವುದು, ಹೆಸರು ಬದಲಾಗಿರುವುದು, ಹಿಂದಿನ ಮಾಲೀಕರ ಹೆಸರು ಮುಂದುವರಿದಿರುವುದು ಹಾಗೂ ಆಸ್ತಿಯ ವಿಸ್ತೀರ್ಣ ದಾಖಲೆಗಳಿಗೆ ಹೊಂದಿಕೆಯಾಗದಿರುವುದು ಸೇರಿದಂತೆ ವಿವಿಧ ತಿದ್ದುಪಡಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಲು ಹೊಸ ವ್ಯವಸ್ಥೆಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇಲಾಖೆಗಳೊಂದಿಗೆ ಸಮನ್ವಯ: ಇ-ಆಸ್ತಿ 2.0 ವ್ಯವಸ್ಥೆಯನ್ನು ಕಾವೇರಿ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದ್ದು, ಬೆಂಗಳೂರು ಜಲಮಂಡಳಿ, ಬೆಸ್ಕಾಂ ಸೇರಿದಂತೆ ಸಂಬಂಧಿತ ಇಲಾಖೆಗಳ ವ್ಯವಸ್ಥೆಗಳೊಂದಿಗೂ ಸಮನ್ವಯಗೊಳಿಸಲಾಗಿದೆ.
ಇದರಿಂದ ಸಾರ್ವಜನಿಕರು ವಿವಿಧ ಕಚೇರಿಗಳಿಗೆ ಅಲೆದಾಡುವ ಅಗತ್ಯ ಕಡಿಮೆಯಾಗಲಿದೆ. ಆಸ್ತಿ ದಾಖಲೆಗಳ ಪ್ರಸ್ತುತ ಸ್ಥಿತಿಯನ್ನೂ ಆನ್ಲೈನ್ ಮೂಲಕವೇ ತಿಳಿದುಕೊಳ್ಳಬಹುದು ಎಂದು ಹೇಳಿದರು.
ದಾಖಲೆಗಳ ಪರಿಶೀಲನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗೆ ಸಹಕಾರಿಯಾಗುವಂತೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನೂ ಬಳಸಲಾಗಿದೆ. ಹೊರನಾಡಿನಲ್ಲಿ ವಾಸಿಸುವ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ ಡಿಜಿಟಲ್ ಸಹಿ ಸೇರಿದಂತೆ ವಿವಿಧ ಡಿಜಿಟಲ್ ಸೌಲಭ್ಯಗಳನ್ನು ಕಲ್ಪಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮುಂದಿನ ಸೋಮವಾರದಿಂದ ಖಾತಾ ಬೈಫರ್ಕೇಶನ್ ಆನ್ಲೈನ್: ನಿಯಮಾನುಸಾರ 20 ಸಾವಿರ ಚದರ ಅಡಿವರೆಗೆ ವಿಸ್ತೀರ್ಣ ಹೊಂದಿರುವ ಆಸ್ತಿಗಳ ಖಾತಾ ಬೈಫರ್ಕೇಶನ್ಗೆ ಮುಂದಿನ ಸೋಮವಾರದಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಅಗತ್ಯ ಪ್ಲಾನ್ಗಳನ್ನು ಆನ್ಲೈನ್ನಲ್ಲೇ ಅಪ್ಲೋಡ್ ಮಾಡಿ ಬೈಫರ್ಕೇಶನ್ ಪ್ರಕ್ರಿಯೆ ಪೂರ್ಣಗೊಳಿಸಿ ಇ-ಖಾತಾ ಪಡೆಯಬಹುದಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.
ಇ-ಆಸ್ತಿ 2.0 ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶಕ್ಕೆ ಮಾದರಿಯಾಗುವಂತಹ ವ್ಯವಸ್ಥೆಯನ್ನು ರೂಪಿಸಿರುವ ಅಧಿಕಾರಿಗಳ ಕಾರ್ಯವನ್ನು ಸಚಿವರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ನಗರ ಪಾಲಿಕೆ ಆಯುಕ್ತ ಜಗದೀಶ್ ಜಿ., ಡಿ.ಎಸ್. ರಮೇಶ್, ಪೊಮ್ಮಲ ಸುನೀಲ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R