ರೋಗಿಗಳ ಸುರಕ್ಷಿತ ನಮ್ಮೆಲ್ಲರ ಜವಾಬ್ದಾರಿ: ಡಾ. ವೀರೇಂದ್ರ ಕುಮಾರ್ ಕೆ.ಜಿ
ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ರೋಗಿಗಳಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ರೋಗಿಗಳ ಸಮಗ್ರ ಆರೈಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ವೀರೇಂದ್ರ ಕುಮಾ
ರೋಗಿಗಳ ಸುರಕ್ಷಿತ ನಮ್ಮೆಲ್ಲರ ಜವಾಬ್ದಾರಿ: ಡಾ. ವೀರೇಂದ್ರ ಕುಮಾರ್ ಕೆ.ಜಿ


ರೋಗಿಗಳ ಸುರಕ್ಷಿತ ನಮ್ಮೆಲ್ಲರ ಜವಾಬ್ದಾರಿ: ಡಾ. ವೀರೇಂದ್ರ ಕುಮಾರ್ ಕೆ.ಜಿ


ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ರೋಗಿಗಳಿಗೆ ಗುಣಮಟ್ಟದ ಹಾಗೂ ಸುರಕ್ಷಿತ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ರೋಗಿಗಳ ಸಮಗ್ರ ಆರೈಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ವೀರೇಂದ್ರ ಕುಮಾರ್ ಕೆ.ಜಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ವಿಭಾಗ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಗುಗ್ಗರಹಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ಗುಗ್ಗರಹಟ್ಟಿಯ ನಗರ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ವಿಶ್ವ ರೋಗಿಗಳ ಸುರಕ್ಷತಾ ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷ ಸೆಪ್ಟೆಂಬರ್ 16 ರಿಂದ 20 ರವರೆಗೆ ವಿಶ್ವ ರೋಗಿಗಳ ಸುರಕ್ಷತಾ ದಿನ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ. ರೋಗಿಗಳಿಗೆ ಸುರಕ್ಷಿತ, ಗುಣಮಟ್ಟದ ಮತ್ತು ಪರಿಣಾಮಕಾರಿ ಆರೋಗ್ಯ ಸೇವೆ ನೀಡುವ ಬಗ್ಗೆ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರಸಕ್ತ ಸಾಲಿನಲ್ಲಿ “ಸಾಂಕ್ರಾಮಿಕವಲ್ಲದ ರೋಗಿಗಳಿಗೆ ಸುರಕ್ಷಿತ ಆರೈಕೆ” ಎಂಬ ಘೋಷವಾಕ್ಯದೊಂದಿಗೆ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದಿನ ದಿನಗಳಲ್ಲಿ ಹೃದಯರೋಗ, ಮಧುಮೇಹ, ಕ್ಯಾನ್ಸರ್ ಹಾಗೂ ದೀರ್ಘಕಾಲದ ಉಸಿರಾಟದ ಸಮಸ್ಯೆಗಳು ವ್ಯಾಪಕವಾಗಿ ಕಂಡುಬರುತ್ತಿವೆ. ಇಂತಹ ಕಾಯಿಲೆಗಳಿಗೆ ಅಲ್ಪಾವಧಿ ಚಿಕಿತ್ಸೆ ಸಾಲದು; ರೋಗಿಗಳು ಹಲವು ವರ್ಷಗಳ ಕಾಲ ನಿಯಮಿತ ತಪಾಸಣೆ, ಔಷಧಿ ಸೇವನೆ ಮತ್ತು ವೈದ್ಯಕೀಯ ಆರೈಕೆ ಪಡೆಯಬೇಕಾಗುತ್ತದೆ. ಹೀಗಾಗಿ ಪ್ರತಿಯೊಂದು ಹಂತದಲ್ಲೂ ರೋಗಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.

ಸುರಕ್ಷತೆ ಎಂದರೆ ಕೇವಲ ಆಸ್ಪತ್ರೆಯ ತಪ್ಪುಗಳನ್ನು ತಡೆಯುವುದಷ್ಟೇ ಅಲ್ಲ; ನಿಖರ ರೋಗ ನಿರ್ಣಯ, ಸೂಕ್ತ ಔಷಧಿ, ಸೋಂಕು ನಿಯಂತ್ರಣ ಹಾಗೂ ರೋಗಿಗಳೊಂದಿಗೆ ಸಕಾರಾತ್ಮಕ ಸಂವಹನ ಹೊಂದುವುದಾಗಿದೆ. ಇದಲ್ಲದೆ, ರೋಗಿಗಳು ಕೂಡ ವೈದ್ಯರ ಸಲಹೆಯಂತೆ ನಿಯಮಿತವಾಗಿ ಔಷಧಿ ಸೇವಿಸುವುದು ಮತ್ತು ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬ0ದರೂ ತಕ್ಷಣ ಆರೋಗ್ಯ ಕಾರ್ಯಕರ್ತರಿಗೆ ತಿಳಿಸುವ ಮೂಲಕ ತಮ್ಮ ಸುರಕ್ಷತೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಇಂದ್ರಾಣಿ ಅವರು ಮಾತನಾಡಿ, ರೋಗಿಗಳ ಉತ್ತಮ ಆರೈಕೆ ಹಾಗೂ ಅವರ ಗುಣಮುಖವಾಗುವಿಕೆಯಿಂದ ಇಡೀ ಸಮಾಜಕ್ಕೆ ಸಂತೋಷ ಸಿಗುತ್ತದೆ ಎಂದು ತಿಳಿಸಿ, ಕ್ಷಯರೋಗ ನಿಯಂತ್ರಣದ ಕುರಿತು ವಿವರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ವೈದ್ಯಾಧಿಕಾರಿ ಡಾ. ಶಗುಪ್ತಾ ವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ್ ಎಸ್. ಕರ್ಜಗಿ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗಂಗಮ್ಮ, ಇಲಾಖೆಯ ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ರೋಗಿಗಳ ಸುರಕ್ಷತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande