ವಂದೇ ಮಾತರಂ ವಿವಾದ: ಆದೇಶ ಮರುಪರಿಶೀಲಿಸುವಂತೆ ಸಿಎಂಗೆ ರಾಜ್ಯಪಾಲರ ಪತ್ರ
ಆದೇಶ ಮರುಪರಿಶೀಲಿಸುವಂತೆ ಸಿಎಂಗೆ ರಾಜ್ಯಪಾಲರ ಪತ್ರ
ರಾಜ್ಯಪಾಲ ಥಾವರಚಂದ್ ಗೆಹ್ಲೋಟ ಸಂಗ್ರಹ ಚಿತ್ತ


ಬೆಂಗಳೂರು, 22 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಹೊರಡಿಸಿರುವ ಆದೇಶಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಆದೇಶವನ್ನು ಮರುಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ನಾಲ್ಕು ಪುಟಗಳ ಪತ್ರದಲ್ಲಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳು ಹಾಗೂ ಸಂವಿಧಾನಾತ್ಮಕ ಅಂಶಗಳನ್ನು ರಾಜ್ಯಪಾಲರು ಉಲ್ಲೇಖಿಸಿದ್ದಾರೆ.

ಕೇಂದ್ರ ಸರ್ಕಾರ ನಿಗದಿಪಡಿಸಿರುವ ‘ವಂದೇ ಮಾತರಂ’ನ ಅಧಿಕೃತ ಆವೃತ್ತಿಯನ್ನೇ ಸಾಮೂಹಿಕ ಗಾಯನ ಸೇರಿದಂತೆ ಅಧಿಕೃತ ಕಾರ್ಯಕ್ರಮಗಳಲ್ಲಿ ಬಳಸಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯಗಳೂ ಕೇಂದ್ರದ ಮಾರ್ಗಸೂಚಿ ಪಾಲಿಸಬೇಕು:‘ವಂದೇ ಮಾತರಂ’ನ ಅಧಿಕೃತ ಆವೃತ್ತಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ನೀಡಿರುವ ಸೂಚನೆಗಳನ್ನು ರಾಜ್ಯ ಸರ್ಕಾರಗಳೂ ಪಾಲಿಸಬೇಕಾಗಿದೆ ಎಂದು ರಾಜ್ಯಪಾಲರು ಪತ್ರದಲ್ಲಿ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ಸಂಕ್ಷಿಪ್ತ ಅಥವಾ ಬದಲಾದ ಆವೃತ್ತಿಯನ್ನು ನಿಗದಿಪಡಿಸುವ ಅಧಿಕಾರದ ಬಗ್ಗೆ ಸರ್ಕಾರ ಪರಿಶೀಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

ಸಂವಿಧಾನಾತ್ಮಕ ಅಂಶಗಳ ಉಲ್ಲೇಖ:ರಾಷ್ಟ್ರೀಯ ಗೀತೆ ಹಾಗೂ ರಾಷ್ಟ್ರಗಾನದ ಕುರಿತ ಕೇಂದ್ರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ತನ್ನ ಸೆ.8ರ ಆದೇಶವನ್ನು ಮರುಪರಿಶೀಲಿಸಬೇಕು ಎಂದು ರಾಜ್ಯಪಾಲರು ಹೇಳಿದ್ದಾರೆ. ರಾಷ್ಟ್ರೀಯ ಗೀತೆಗೆ ಸಂಬಂಧಿಸಿದ ನಿಯಮಗಳ ಪಾಲನೆ ಕೇವಲ ಆಡಳಿತಾತ್ಮಕ ವಿಚಾರವಲ್ಲ ಎಂಬ ಅಂಶವನ್ನೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande