
ಬೆಂಗಳೂರು, 22 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಸಾಲಮನ್ನಾ ವಿಚಾರವಾಗಿ ವಿಧಾನ ಪರಿಷತ್ತಿನಲ್ಲಿ ನಡೆದ ಚರ್ಚೆ ವೇಳೆ ಕೆಪಿಸಿಸಿ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ನೀಡಿದ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಪ್ರಸಾದ್ ನೀಡಿದ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ತೀವ್ರ ಪ್ರತಿಭಟನೆ ನಡೆಸಿದರು.
ಸಾಲಮನ್ನಾ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ, “800 ರೈತರ ಪ್ರಾಣ ತೆಗೆದುಕೊಂಡಿರುವ ನರೇಂದ್ರ ಮೋದಿ” ಎಂದು ಹರಿಪ್ರಸಾದ್ ಹೇಳಿರುವುದು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಹರಿಪ್ರಸಾದ್ ಅವರ ಹೇಳಿಕೆಯನ್ನು ಖಂಡಿಸಿದರು. ಈ ವೇಳೆ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಇದಕ್ಕೂ ಮುನ್ನ ಕಾಂಗ್ರೆಸ್ನ ಸುನಿಲ್ ಅವರು, “ಜನರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದವರು ಎಲ್ಲಿ?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸಭಾಪತಿ ಸಲೀಂ ಅಹ್ಮದ್ ಅವರು ಸದಸ್ಯರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿ, “ಇದೇನು ಮೀನು ಮಾರುಕಟ್ಟೆಯಾ?” ಎಂದು ಪ್ರಶ್ನಿಸಿದರು. ಇದಕ್ಕೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ತಿರುಗೇಟು ನೀಡಿ, “ಫಿಶ್ ಮಾರ್ಕೆಟ್ ವ್ಯವಸ್ಥೆ ಮಾಡಿದ್ದು ನೀವೇ. ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಹೀಗೆ ಮಾತನಾಡುತ್ತಿದ್ದೀರಿ” ಎಂದು ಆಕ್ಷೇಪಿಸಿದರು.
ಸದಸ್ಯರನ್ನು ಸಮಾಧಾನಪಡಿಸಿದ ಸಭಾಪತಿ, “ಜನ ನಮ್ಮನ್ನು ನೋಡುತ್ತಿದ್ದಾರೆ. ಗೌರವದಿಂದ ವಿಚಾರ ಚರ್ಚೆ ಮಾಡಿ. ಒಬ್ಬರಿಗೊಬ್ಬರು ಅಗೌರವ ತರುವಂತೆ ನಡೆದುಕೊಳ್ಳಬೇಡಿ” ಎಂದು ಮನವಿ ಮಾಡಿದರು. ಬಳಿಕ ಚರ್ಚೆ ಮುಂದುವರಿಯಿತು.
ಬಿಜೆಪಿ–ಜೆಡಿಎಸ್ ಸಭಾತ್ಯಾಗಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಡಿಬಿಟಿ ಮೂಲಕ ಹಣ ಪಾವತಿ ಸರಿಯಾಗಿ ನಡೆಯುತ್ತಿದೆ ಎಂದು ಹೇಳಿದಾಗ ಸಚಿವ ಸಂತೋಷ್ ಲಾಡ್ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಅವರು ಎದ್ದು ನಿಂತರು.ಇದರಿಂದ ಮತ್ತೆ ಗದ್ದಲ ಉಂಟಾಯಿತು. ಪ್ರತಿಪಕ್ಷ ನಾಯಕರಿಗೆ ಮಾತನಾಡಲು ಆಡಳಿತ ಪಕ್ಷದ ಸದಸ್ಯರು ಪದೇಪದೇ ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ಆಕ್ಷೇಪಿಸಿದರು.
“ಸದನ ಕರೆದು ಚರ್ಚೆ ಮಾಡಲು ಮಾತನಾಡಲು ಬಿಡುವುದಿಲ್ಲ ಎಂದರೆ ಹೇಗೆ? ವಿಶೇಷ ಸದನ ಕರೆದಿರುವುದು ಇದಕ್ಕಾಗಿಯೇನಾ?” ಎಂದು ಬಿಜೆಪಿ ಸದಸ್ಯ ಸಿ.ಟಿ. ರವಿ ಪ್ರಶ್ನಿಸಿದರು.
ಆಡಳಿತ ಪಕ್ಷದ ನಡೆ ಖಂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಈ ಹಿನ್ನೆಲೆಯಲ್ಲಿ ಸಭಾಪತಿಗಳು ಕೆಲಕಾಲ ವಿಧಾನ ಪರಿಷತ್ ಕಲಾಪವನ್ನು ಮುಂದೂಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R