
ಬಾಗಲಕೋಟೆ, 22 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಪಟ್ಟಿ ಗ್ರಾಮದ ಗ್ರಾಮದೇವಿ ಜಾತ್ರಾ ಮೈದಾನವನ್ನು ಸ್ವಚ್ಛ ಹಾಗೂ ಸುಂದರವಾಗಿಡುವ ಉದ್ದೇಶದಿಂದ ‘ಗೆಳೆಯರ ಬಳಗ’ದ ವತಿಯಿಂದ ಸ್ವಚ್ಛತಾ ಹಾಗೂ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗ್ರಾಮದ ಜಾತ್ರಾ ಮೈದಾನದಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯ ಹಾಗೂ ಅನಗತ್ಯ ವಸ್ತುಗಳನ್ನು ತೆರವುಗೊಳಿಸಿ, ಮೈದಾನವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಗೆಳೆಯರ ಬಳಗದ ಸದಸ್ಯರು ಹಾಗೂ ಸ್ಥಳೀಯರು ಕೈಗೊಂಡರು.
ಈ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮದ ಯುವಕರು ಮಾತ್ರವಲ್ಲದೆ ಹಿರಿಯರೂ ಉತ್ಸಾಹದಿಂದ ಪಾಲ್ಗೊಂಡು, ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಶ್ರಮದಾನ ಮಾಡಿದರು. ಸಾರ್ವಜನಿಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಜಾತ್ರೆ ಸೇರಿದಂತೆ ವಿವಿಧ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯುವ ಮೈದಾನವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯವನ್ನು ಮನಗಂಡು ಈ ಕಾರ್ಯ ಕೈಗೊಳ್ಳಲಾಯಿತು.
ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲ ಗೆಳೆಯರು ಹಾಗೂ ಹಿರಿಯರಿಗೆ ‘ಗೆಳೆಯರ ಬಳಗ’ದ ಪರವಾಗಿ ಅನಂತ ಧನ್ಯವಾದಗಳನ್ನು ಅರ್ಪಿಸಿರುವ ನರೇಂದ್ರ ಮಾನೆ, ಪರಿಸರದ ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದು ಹೇಳಿದರು.
ಜಾತ್ರಾ ಮೈದಾನ ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಕಾಪಾಡುವ ಮೂಲಕ ಆರೋಗ್ಯಕರ ಹಾಗೂ ಸುಂದರ ಪರಿಸರ ನಿರ್ಮಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಿ, ತಮ್ಮ ಸಮಯ ಮತ್ತು ಶ್ರಮವನ್ನು ಸಮಾಜದ ಹಿತಕ್ಕಾಗಿ ನೀಡಿದ ಎಲ್ಲರ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ತಿಳಿಸಿದರು.
ಯುವಕರು ಹಾಗೂ ಹಿರಿಯರು ಒಗ್ಗಟ್ಟಿನಿಂದ ನಡೆಸಿದ ಈ ಶ್ರಮದಾನ ಕಾರ್ಯಕ್ರಮವು ಗ್ರಾಮದಲ್ಲಿ ಪರಿಸರ ಸ್ವಚ್ಛತೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಸಂದೇಶವನ್ನು ಮೂಡಿಸುವಂತಾಗಿದೆ. ಮುಂದಿನ ದಿನಗಳಲ್ಲಿಯೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಮುಂದುವರಿಸುವ ಆಶಯವನ್ನು ‘ಗೆಳೆಯರ ಬಳಗ’ ವ್ಯಕ್ತಪಡಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande