ಗೋಟೂರು:ಜಿಲ್ಲಾ ರೋಗವಾಹಕಗಳ ನಿಯಂತ್ರಣಾಧಿಕಾರಿ ಭೇಟಿ-ಪರಿಶೀಲನೆ
ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಳ್ಳಾರಿ ತಾಲೂಕಿನ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗೋಟೂರು ಗ್ರಾಮದಲ್ಲಿ ಜ್ವರದ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ ಅವರ ನೇತೃತ್ವದ ವೈದ್ಯಾಧಿಕ
ಗೋಟೂರು ಗ್ರಾಮಕ್ಕೆ ಜಿಲ್ಲಾ ರೋಗವಾಹಕಗಳ ನಿಯಂತ್ರಣಾಧಿಕಾರಿ ಭೇಟಿ-ಪರಿಶೀಲನೆ


ಗೋಟೂರು ಗ್ರಾಮಕ್ಕೆ ಜಿಲ್ಲಾ ರೋಗವಾಹಕಗಳ ನಿಯಂತ್ರಣಾಧಿಕಾರಿ ಭೇಟಿ-ಪರಿಶೀಲನೆ


ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಳ್ಳಾರಿ ತಾಲೂಕಿನ ಮೋಕಾ ಸಮುದಾಯ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗೋಟೂರು ಗ್ರಾಮದಲ್ಲಿ ಜ್ವರದ ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ ಅವರ ನೇತೃತ್ವದ ವೈದ್ಯಾಧಿಕಾರಿಗಳ ತಂಡವು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಗ್ರಾಮದಲ್ಲಿ ಜ್ವರ ಸಮೀಕ್ಷೆ, ಲಾರ್ವಾ ಸಮೀಕ್ಷೆ ಹಾಗೂ ಸೊಳ್ಳೆ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಿದ ಅಧಿಕಾರಿಗಳ ತಂಡ, ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.

ಸಮೀಕ್ಷೆ ವೇಳೆ ಗ್ರಾಮದಲ್ಲಿ ಅಲ್ಲಲ್ಲಿ ಜ್ವರದ ಪ್ರಕರಣಗಳು ಪತ್ತೆಯಾಗಿದ್ದು, ಇವರ ಪೈಕಿ ಹಲವರು ಈಗಾಗಲೇ ಮೋಕಾ ಸಮುದಾಯ ಆರೋಗ್ಯ ಕೇಂದ್ರ, ಬಿಎಂಸಿಆರ್ಸಿ ಆಸ್ಪತ್ರೆ ಹಾಗೂ ಬಳ್ಳಾರಿಯ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್. ಅಬ್ದುಲ್ಲಾ ಅವರು ತಿಳಿಸಿದ್ದಾರೆ.

*ಗ್ರಾಮದಲ್ಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ:*

ಜ್ವರ ಪೀಡಿತರಿಗೆ ಸ್ಥಳದಲ್ಲೇ ತಕ್ಷಣದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು, ಅಗತ್ಯ ಔಷಧೋಪಕರಣಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಗ್ರಾಮದಲ್ಲಿ ಜ್ವರದ ಪ್ರಕರಣಗಳು ಸಂಪೂರ್ಣ ಶೂನ್ಯಕ್ಕೆ ಬರುವವರೆಗೆ ಈ ಕೇಂದ್ರವನ್ನು ಮುಂದುವರಿಸಲು ಸೂಚಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ತಕ್ಷಣವೇ ಮೋಕಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

*ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆಗೆ ಕಟ್ಟುನಿಟ್ಟಿನ ಕ್ರಮ:*

ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿಯನ್ನೊಳಗೊಂಡ ತಂಡಗಳು ಮನೆ-ಮನೆಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಕೈಗೊಂಡಿವೆ. ಲಾರ್ವಾ ಕಂಡುಬಂದ ನೀರಿನ ಸಂಗ್ರಹಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗದ ಕಡೆಗಳಲ್ಲಿ ಲಾರ್ವಾ ನಾಶಪಡಿಸಲು ‘ಥೆಮಿಫಾಸ್' ದ್ರಾವಣ ಬಳಸಲು ನಿರ್ದೇಶನ ನೀಡಲಾಗಿದೆ. ಇದರೊಂದಿಗೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮನೆಗಳಲ್ಲಿ ಒಳಾಂಗಣ ಧೂಮೀಕರಣ (ಫಾಗಿಂಗ್) ನಡೆಸಲಾಗುತ್ತಿದೆ ಎಂದಿದ್ದಾರೆ.

ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಐಇಸಿ/ಎಸ್ಬಿಸಿಸಿ ಚಟುವಟಿಕೆಗಳ ಮೂಲಕ ಡೆಂಗ್ಯೂ ಹರಡುವಿಕೆ ತಡೆಗಟ್ಟಲು ಅಗತ್ಯವಿರುವ ಸ್ವಯಂ ರಕ್ಷಣೆ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.

*ಪ್ರತಿದಿನ ನೀರು ಪೂರೈಕೆಗೆ ಸೂಚನೆ:*

ಪರಿಶೀಲನೆ ವೇಳೆ ಗ್ರಾಮದ ಕೆಲವು ಬಡಾವಣೆಗಳಲ್ಲಿ 4-5 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿರುವುದು ಕಂಡುಬಂದಿದ್ದು, ಇದರಿಂದ ಸಾರ್ವಜನಿಕರು ನೀರನ್ನು ಹೆಚ್ಚು ದಿನ ಸಂಗ್ರಹಿಸಿಡುವುದರಿಂದ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಹಾಗಾಗಿ ಎಲ್ಲ ಮನೆಗಳಿಗೂ ಪ್ರತಿದಿನ ನಿಯಮಿತವಾಗಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕೀಟಶಾಸ್ತ್ರಜ್ಞರಾದ ನಂದಿನಿ, ಜಿಲ್ಲಾ ವಿಬಿಸಿ ಸಲಹೆಗಾರ ಪ್ರತಾಪ್, ತಾಲೂಕು ಎಂ.ಟಿ.ಎಸ್. ಬಾಬುರಾವ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಂಪಾಪತಿ ಹಾಗೂ ಮೇಲ್ವಿಚಾರಣಾ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande