ವಿಶೇಷ ಅಧಿವೇಶನವೋ, ಮುಂದುವರಿದ ಅಧಿವೇಶನವೋ? ಸದನದಲ್ಲಿ ಅಶೋಕ್–ಡಿಕೆಶಿ ವಾಕ್ಸಮರ
ಮುಂದುವರಿದ ಅಧಿವೇಶನವೋ? ಸದನದಲ್ಲಿ ಅಶೋಕ್–ಡಿಕೆಶಿ ವಾಕ್ಸಮರ
ವಿಶೇಷ ಅಧಿವೇಶನವೋ, ಮುಂದುವರಿದ ಅಧಿವೇಶನವೋ? ಸದನದಲ್ಲಿ ಅಶೋಕ್–ಡಿಕೆಶಿ ವಾಕ್ಸಮರ


ಬೆಂಗಳೂರು, 21 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕಸ್ತೂರಿ ರಂಗನ್ ವರದಿ ಹಾಗೂ ಬರಗಾಲ ನಿರ್ವಹಣೆ ಕುರಿತು ಚರ್ಚಿಸಲು ಕರೆಯಲಾಗಿರುವ ವಿಧಾನಮಂಡಲದ ಅಧಿವೇಶನ ವಿಶೇಷ ಅಧಿವೇಶನವೋ ಅಥವಾ ಮುಂಗಾರು ಅಧಿವೇಶನದ ಮುಂದುವರಿದ ಅಧಿವೇಶನ ಎಂಬ ವಿಚಾರ ವಿಧಾನಸಭೆಯಲ್ಲಿ ಸೋಮವಾರ ಗದ್ದಲಕ್ಕೆ ಕಾರಣವಾಯಿತು.

ಅಧಿವೇಶನ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಈ ವಿಚಾರವನ್ನು ಪ್ರಸ್ತಾಪಿಸಿ, ರಾಜ್ಯಪಾಲರು ಮುಂಗಾರು ಅಧಿವೇಶನವನ್ನು ಮುಕ್ತಾಯಗೊಳಿಸದಿರುವಾಗ ಇದನ್ನು ವಿಶೇಷ ಅಧಿವೇಶನ ಎಂದು ಹೇಗೆ ಕರೆಯಲಾಗುತ್ತದೆ ಎಂದು ಪ್ರಶ್ನಿಸಿದರು.‘ವಿಶೇಷ ಅಧಿವೇಶನ ಎಂದು ಮುದ್ರಿಸಿರುವುದಾದರೆ, ತಪ್ಪಾಗಿ ಪ್ರಿಂಟ್ ಮಾಡಿಸಿದವರಿಗೆ ಛೀಮಾರಿ ಹಾಕಿ’ ಎಂದು ಅಶೋಕ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನುದ್ದೇಶಿಸಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ನೀನು ಹೇಗಾದರೂ ಕರೆಯಪ್ಪಾ’ ಎಂದು ಹೇಳಿದ್ದು, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಕೆಲಕಾಲ ವಾಕ್ಸಮರಕ್ಕೆ ಕಾರಣವಾಯಿತು. ವಿಶೇಷ ಅಧಿವೇಶನ ಕರೆದಿರುವುದಕ್ಕೆ ಸರ್ಕಾರಕ್ಕೆ ಸಿಗುವ ಶ್ರೇಯಸ್ಸನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದೂ ಮುಖ್ಯಮಂತ್ರಿ ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ‘ಇಲ್ಲಿ ಯಾರಿಗೂ ಇಗೋ ಬೇಡ’ ಎಂದು ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರು.‘10ನೇ ಅಧಿವೇಶನದ ಮುಂದುವರಿದ ಉಪವೇಶನ’ವಿವಾದಕ್ಕೆ ಸ್ಪಷ್ಟನೆ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ, ‘ಇದು 10ನೇ ಅಧಿವೇಶನದ ಮುಂದುವರಿದ ಉಪವೇಶನ’ ಎಂದು ಹೇಳಿದರು.

‘ವಿಶೇಷ ಅಧಿವೇಶನ ಎಂದು ಮುದ್ರಿಸಿರುವುದು ನಮ್ಮದೇ ತಪ್ಪು. ಅದನ್ನು ವಿಶೇಷ ಚರ್ಚೆ ಎಂದು ತಿದ್ದಿಕೊಂಡು ಮುಂದಕ್ಕೆ ಹೋಗೋಣ’ ಎಂದು ಅವರು ಮನವಿ ಮಾಡಿದರು. ಸಚಿವರ ಸ್ಪಷ್ಟನೆಯ ಬಳಿಕ ಪ್ರತಿಪಕ್ಷ ಶಾಸಕರು ತೃಪ್ತಿ ವ್ಯಕ್ತಪಡಿಸಿದರು.‘ಜನರ ಭಾವನೆ ಅರ್ಥ ಮಾಡಿಕೊಂಡು ಸದನ ಕರೆದಿದ್ದೇವೆ’ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ಸದನ ಕರೆಯಲಾಗಿದೆ ಎಂದು ಹೇಳಿದರು.

‘ಅಧಿವೇಶನಕ್ಕೂ ಮುನ್ನ ನಾಲ್ಕು ವಿಭಾಗಗಳಲ್ಲಿ ಜನರೊಂದಿಗೆ ಸಭೆ ನಡೆಸಿದ್ದೇವೆ. ಶಾಸಕರನ್ನೂ ಕರೆದು ಮಾತನಾಡಿದ್ದೇನೆ. ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಎದುರಾಗಿರುವ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದೇನೆ. ಏನು ಮಾಡಬೇಕು ಎಂಬುದರ ಕುರಿತು ಚರ್ಚಿಸಲು ಪ್ರತಿಪಕ್ಷಗಳಿಗೂ ಅವಕಾಶ ನೀಡಿದ್ದೇವೆ’ ಎಂದು ಅವರು ಹೇಳಿದರು.

‘ಎಲ್ಲ ಕ್ಷೇತ್ರಗಳಿಗೂ ಭೇಟಿ ನೀಡಿದ್ದೇನೆ. ಜನರ ಭಾವನೆಯೊಂದಿಗೆ ಸದನಕ್ಕೆ ಬಂದಿದ್ದೇನೆ. ಇದು ನನ್ನ ಸರ್ಕಾರವಲ್ಲ, ಎಲ್ಲರ ಸರ್ಕಾರ’ ಎಂದು ಮುಖ್ಯಮಂತ್ರಿ ತಿಳಿಸಿದರು. ನಿಲುವಳಿ ಸೂಚನೆಯ ಅಗತ್ಯವಿಲ್ಲ ಎಂದೂ ಅವರು ಹೇಳಿದರು.

ನಿಲುವಳಿ ಸೂಚನೆ ವಿಚಾರದಲ್ಲೂ ವಾಗ್ವಾದಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶೋಕ್, ‘ವಿಶೇಷ ಅಧಿವೇಶನವನ್ನು ಯಾಕೆ ಕರೆದಿದ್ದೀರಿ? ನಿಲುವಳಿ ಸೂಚನೆ ಮೇಲೆ ಚರ್ಚೆ ಮಾಡಿದರೆ ಏನು ತಪ್ಪು?’ ಎಂದು ಪ್ರಶ್ನಿಸಿದರು.‘ನಿಲುವಳಿ ಸೂಚನೆ ಮಂಡನೆ ತಪ್ಪು ಎಂದಾದರೆ ಹಿಂಪಡೆಯುತ್ತೇನೆ. ನಾನೇನೂ ಹಠಕ್ಕೆ ಬೀಳುವುದಿಲ್ಲ’ ಎಂದು ಅಶೋಕ್ ಹೇಳಿದರು.

ಶಾಸಕ ಸುನೀಲ್ ಕುಮಾರ್ ಕೂಡ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಹೆಚ್.ಕೆ. ಪಾಟೀಲ್ ಪತ್ರ ಬರೆದು ನಿಮಗೆ ಮಂಗಳಾರತಿ ಹಾಕಿದ್ದಾರೆ’ ಎಂದು ಅವರು ಟೀಕಿಸಿದರು.

ಸ್ಪೀಕರ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಅವರು, ಮುಖ್ಯಮಂತ್ರಿ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡುತ್ತಾರೆ ಎಂದು ಸದನದಲ್ಲಿ ಹೇಳಿದರು.

ಈ ಬೆಳವಣಿಗೆಗಳ ನಡುವೆ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ತೀವ್ರ ವಾಗ್ವಾದ ನಡೆದ ಬಳಿಕ ಕಲಾಪ ಮುಂದುವರಿಯಿತು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande