
ಬೆಂಗಳೂರು, 21 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಕಸ್ತೂರಿ ರಂಗನ್ ವರದಿ ಹಾಗೂ ಬರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆಯಲಾಗಿರುವ ವಿಶೇಷ ಅಧಿವೇಶನದ ಆರಂಭದಲ್ಲೇ ವಂದೇ ಮಾತರಂ ಗೀತೆ ಹಾಡುವ ವಿಚಾರ ಆಡಳಿತಾರೂಢ ಪಕ್ಷ ಹಾಗೂ ಪ್ರತಿಪಕ್ಷದ ನಡುವೆ ಜಟಾಪಟಿಗೆ ಕಾರಣವಾಯಿತು.
ವಿಶೇಷ ಅಧಿವೇಶನ ಆರಂಭವಾಗುತ್ತಿದ್ದಂತೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿ ಹಾಡಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸದನದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದರು.
ವಿಪಕ್ಷ ಸದಸ್ಯರು ಪೂರ್ಣ ವಂದೇ ಮಾತರಂ ಹಾಡುತ್ತಿದ್ದ ಸಂದರ್ಭದಲ್ಲಿ ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಇದೇ ವೇಳೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಪ್ರಕ್ರಿಯೆಯನ್ನೂ ಸ್ಪೀಕರ್ ಕೈಗೊಂಡರು.
ಬಿಜೆಪಿ ಸದಸ್ಯರು ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ ಬಳಿಕ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳನ್ನು ಕೂಗಿದರು. ಈ ಮೂಲಕ ವಿಶೇಷ ಅಧಿವೇಶನದ ಆರಂಭದಲ್ಲೇ ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ವಾಗ್ವಾದದ ವಾತಾವರಣ ನಿರ್ಮಾಣವಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.