ಏಷ್ಯನ್ ಕ್ರೀಡಾಕೂಟ: 10 ಮೀಟರ್ ಏರ್ ರೈಫಲ್ನಲ್ಲಿ ಹಿಮಾಂಶುಗೆ ಬೆಳ್ಳಿ, ರುದ್ರಾಂಕ್ಷ್ಗೆ ಕಂಚು
ಐಚಿ-ನಾಗೋಯಾ, 21 ಸೆಪ್ಟೆಂಬರ್(ಹಿ.ಸ.): ಆ್ಯಂಕರ್: 2026ರ ಏಷ್ಯನ್ ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಭಾರತದ ಹಿಮಾಂಶು ಢಿಲ್ಲೋನ್ ಬೆಳ್ಳಿ ಹಾಗೂ ರುದ್ರಾಂಕ್ಷ್ ಪಾಟೀಲ್ ಕಂಚಿನ ಪದಕ ಗೆದ್ದಿದ್ದಾರೆ. ಚೀನಾದ ಶೆಂಗ್ ಲಿಹಾವೊ ಚಿನ್ನದ ಪದಕ ಪಡೆದರು. ರುದ್ರಾಂಕ್ಷ್ ಫ
भारतीय निशानेबाज हिमांशु ढिल्लों और रुद्रांक्ष पाटिल


ಐಚಿ-ನಾಗೋಯಾ, 21 ಸೆಪ್ಟೆಂಬರ್(ಹಿ.ಸ.):

ಆ್ಯಂಕರ್:

2026ರ ಏಷ್ಯನ್ ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಭಾರತದ ಹಿಮಾಂಶು ಢಿಲ್ಲೋನ್ ಬೆಳ್ಳಿ ಹಾಗೂ ರುದ್ರಾಂಕ್ಷ್ ಪಾಟೀಲ್ ಕಂಚಿನ ಪದಕ ಗೆದ್ದಿದ್ದಾರೆ. ಚೀನಾದ ಶೆಂಗ್ ಲಿಹಾವೊ ಚಿನ್ನದ ಪದಕ ಪಡೆದರು.

ರುದ್ರಾಂಕ್ಷ್ ಫೈನಲ್‌ನಲ್ಲಿ ಉತ್ತಮ ಆರಂಭ ಮಾಡಿದರು. ಮೊದಲ ಸರಣಿಯಲ್ಲಿ 52.8 ಅಂಕ ಗಳಿಸಿ ಮುನ್ನಡೆ ಸಾಧಿಸಿದ ಅವರು, ಎರಡನೇ ಸರಣಿಯಲ್ಲಿ 53.2 ಅಂಕ ಗಳಿಸುವ ಮೂಲಕ ತಮ್ಮ ಮುನ್ನಡೆಯನ್ನು 1.1 ಅಂಕಗಳಿಗೆ ಹೆಚ್ಚಿಸಿಕೊಂಡರು. ಹಿಮಾಂಶು ಕೂಡ ಪದಕದ ಸ್ಪರ್ಧೆಯಲ್ಲಿ ಮುಂದುವರಿದು ಕೆಲಕಾಲ ಎರಡನೇ ಸ್ಥಾನಕ್ಕೇರಿದ್ದರು.

12 ಶಾಟ್‌ಗಳ ಬಳಿಕ ರುದ್ರಾಂಕ್ಷ್ 127.4 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಹಿಮಾಂಶು 126.6 ಹಾಗೂ ಶೆಂಗ್ ಲಿಹಾವೊ 126.3 ಅಂಕಗಳೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರು.

16 ಶಾಟ್‌ಗಳ ಬಳಿಕ ಶೆಂಗ್ 168.8 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದರು. ರುದ್ರಾಂಕ್ಷ್ ಮತ್ತು ಹಿಮಾಂಶು ತಲಾ 168.6 ಅಂಕಗಳೊಂದಿಗೆ ಸಮಬಲದಲ್ಲಿದ್ದರು. ಬಳಿಕ ಹಿಮಾಂಶು 10.9 ಅಂಕಗಳ ಅತ್ಯುತ್ತಮ ಶಾಟ್ ದಾಖಲಿಸಿ ರುದ್ರಾಂಕ್ಷ್‌ಗಿಂತ ಕೇವಲ 0.1 ಅಂಕ ಹಿಂದಿದ್ದರು. ಮುಂದಿನ ಶಾಟ್‌ನಲ್ಲಿ 9.8 ಅಂಕ ಗಳಿಸಿದ್ದರಿಂದ ಮೂರನೇ ಸ್ಥಾನಕ್ಕೆ ಜಾರಿದರೂ, 10.6 ಅಂಕಗಳ ಶಾಟ್ ಮೂಲಕ ಮತ್ತೆ ಪದಕದ ಸ್ಪರ್ಧೆಯಲ್ಲಿ ಉಳಿದರು.

20 ಶಾಟ್‌ಗಳ ಬಳಿಕ ಶೆಂಗ್ ತಮ್ಮ ಮುನ್ನಡೆಯನ್ನು ಒಂದು ಅಂಕಕ್ಕೆ ವಿಸ್ತರಿಸಿದರು. ರುದ್ರಾಂಕ್ಷ್ 210.6 ಮತ್ತು ಹಿಮಾಂಶು 210.0 ಅಂಕಗಳೊಂದಿಗೆ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿದ್ದರು.

22 ಶಾಟ್‌ಗಳ ಬಳಿಕ ರುದ್ರಾಂಕ್ಷ್ 230.9 ಅಂಕಗಳೊಂದಿಗೆ ಸ್ಪರ್ಧೆಯಿಂದ ಹೊರಬಿದ್ದರೆ, ಹಿಮಾಂಶು 231.0 ಅಂಕಗಳೊಂದಿಗೆ 0.1 ಅಂಕದ ಮುನ್ನಡೆ ಸಾಧಿಸಿದರು. ರುದ್ರಾಂಕ್ಷ್ ದಾಖಲಿಸಿದ 9.7 ಅಂಕಗಳ ಶಾಟ್ ನಿರ್ಣಾಯಕವಾಗಿ ಪರಿಣಮಿಸಿ ಅವರು ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಇದರೊಂದಿಗೆ ಚಿನ್ನದ ಪದಕಕ್ಕಾಗಿ ಹಿಮಾಂಶು ಮತ್ತು ಶೆಂಗ್ ನಡುವೆ ನೇರ ಪೈಪೋಟಿ ನಡೆಯಿತು. ಇಬ್ಬರೂ ಅಂತಿಮ ಶಾಟ್‌ನಲ್ಲಿ ತಲಾ 10.6 ಅಂಕ ಗಳಿಸಿದರು. ಆದರೆ ಒಟ್ಟು 233.0 ಅಂಕ ಗಳಿಸಿದ ಶೆಂಗ್ ಚಿನ್ನ ಗೆದ್ದರು. ಹಿಮಾಂಶು 231.0 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆದರು.

ಈ ಫಲಿತಾಂಶದೊಂದಿಗೆ ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಭಾರತ ಬೆಳ್ಳಿ ಮತ್ತು ಕಂಚಿನ ಪದಕಗಳೊಂದಿಗೆ ದ್ವಿಪದಕ ಸಾಧನೆ ಮಾಡಿತು.

ಇದಕ್ಕೂ ಮುನ್ನ ರುದ್ರಾಂಕ್ಷ್, ಪಾರ್ಥ ಮಾನೆ ಮತ್ತು ಹಿಮಾಂಶು ಢಿಲ್ಲೋನ್ ಅವರನ್ನೊಳಗೊಂಡ ಭಾರತ ತಂಡ ಪುರುಷರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಗೆದ್ದಿತ್ತು. ಭಾರತ 1,890.1 ಅಂಕ ಗಳಿಸಿದ್ದರೆ, ಚೀನಾ 1,899.0 ಅಂಕಗಳೊಂದಿಗೆ ಚಿನ್ನ ಮತ್ತು ದಕ್ಷಿಣ ಕೊರಿಯಾ 1,841.4 ಅಂಕಗಳೊಂದಿಗೆ ಕಂಚು ಗೆದ್ದಿತ್ತು.

ಇತರ ವಿಭಾಗಗಳಲ್ಲಿ ಭಾರತೀಯರ ಸಾಧನೆ

ಸಾಫ್ಟ್ ಟೆನಿಸ್‌ನ ಮಿಶ್ರ ಡಬಲ್ಸ್‌ ಗ್ರೂಪ್ ‘ಬಿ’ ವಿಭಾಗದಲ್ಲಿ ಆಧ್ಯಾ ತಿವಾರಿ ಮತ್ತು ಜಯ್ ಮೀನಾ ಜೋಡಿ ಕಂಬೋಡಿಯಾದ ವೀವಾ ಚಾವೊ ಮತ್ತು ಚಾನ್ರೋಸೆಕಾ ಖುನ್ ಜೋಡಿಯನ್ನು 5–0 ಅಂತರದಿಂದ ಸೋಲಿಸಿ ಅಭಿಯಾನ ಆರಂಭಿಸಿತು. ಬಳಿಕ ಮಂಗೋಲಿಯಾದ ಬುಡ್ ನ್ಯಾಮದೋರ್ಜ್ ಮತ್ತು ಎಂಖ್ಖುಸ್ಲೆನ್ ಗಾನ್ಬಾತರ್ ಜೋಡಿಯನ್ನು ಸೋಲಿಸಿದ ಭಾರತ ಜೋಡಿ, ದಕ್ಷಿಣ ಕೊರಿಯಾದ ಕಿಮ್ ಯೋನ್-ಹ್ವಾ ಮತ್ತು ಜಾಕ್ಯು ಪಾರ್ಕ್ ವಿರುದ್ಧ ಸೋಲು ಕಂಡಿತು. ಆದರೂ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು 16ರ ಸುತ್ತಿಗೆ ಅರ್ಹತೆ ಗಳಿಸಿತು.

ಈಜಿನಲ್ಲಿ ಶ್ರೀಹರಿ ನಟರಾಜ್ ಪುರುಷರ 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನ ಫೈನಲ್‌ಗೆ ಪ್ರವೇಶಿಸಿದ್ದಾರೆ. ಋಷಭ್ ದಾಸ್ ಮೀಸಲು ಆಟಗಾರರಾಗಿದ್ದಾರೆ. ಮಣಿ ಆಕಾಶ್ ಮತ್ತು ಗಿತೇಶ್ ಶಾ ಪುರುಷರ 50 ಮೀಟರ್ ಫ್ರೀಸ್ಟೈಲ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಧನುಷ್ ಸುರೇಶ್ ಕೂಡ ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್‌ನ ಫೈನಲ್‌ಗೆ ಪ್ರವೇಶಿಸಲಿಲ್ಲ.

ವೂಶುವಿನಲ್ಲಿ ನಿಯೆಮನ್ ವಾಂಗ್ಸು ಮಹಿಳೆಯರ ಚಾಂಗ್‌ಕ್ವಾನ್ ಫೈನಲ್‌ನಲ್ಲಿ 15ನೇ ಸ್ಥಾನ ಪಡೆದರು. ಟೇಬಲ್ ಟೆನಿಸ್‌ನಲ್ಲಿ ಭಾರತೀಯ ಮಹಿಳಾ ತಂಡ ‘ಎಫ್’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 3–0 ಅಂತರದಿಂದ ಸೋಲಿಸಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande