
ವಿಜಯಪುರ, 21 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಗ್ರಾಮೀಣ ಭಾಗದ ರೈತರ ಆರ್ಥಿಕ ಪ್ರಗತಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಾದ ಸಹಕಾರ ನೀಡುವಲ್ಲಿ ಸಹಕಾರಿ ರಂಗದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ರೈತರ ಆಶಾಕಿರಣವಾಗಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಇವಣಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು 50 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ಇವಣಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 50ನೇ ವಾರ್ಷಿಕೋತ್ಸವ ಹಾಗೂ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹಕಾರಿ ಸಂಘಗಳು ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಪ್ರಮುಖ ಆಧಾರಸ್ತಂಭಗಳಾಗಿವೆ. ವಿಶೇಷವಾಗಿ ಕೃಷಿಯನ್ನೇ ಅವಲಂಬಿಸಿರುವ ರೈತರಿಗೆ ಅಗತ್ಯ ಸಂದರ್ಭದಲ್ಲಿ ಸಾಲ ಸೌಲಭ್ಯ, ಕೃಷಿ ಚಟುವಟಿಕೆಗಳಿಗೆ ನೆರವು ಹಾಗೂ ವಿವಿಧ ರೀತಿಯ ಸಹಕಾರ ಒದಗಿಸುವ ಮೂಲಕ ರೈತರ ಬದುಕಿನಲ್ಲಿ ಸಹಕಾರಿ ಸಂಸ್ಥೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.
ಇವಣಗಿ ಸಹಕಾರ ಸಂಘವು ಕಳೆದ ಐದು ದಶಕಗಳ ಅವಧಿಯಲ್ಲಿ ರೈತರು ಹಾಗೂ ಗ್ರಾಮೀಣ ಜನರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಾ ತನ್ನದೇ ಆದ ಸೇವಾ ಪರಂಪರೆಯನ್ನು ನಿರ್ಮಿಸಿಕೊಂಡಿದೆ. ಸಂಘದ ಸುದೀರ್ಘ ಪಯಣದಲ್ಲಿ ಹಲವಾರು ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ತಮ್ಮ ಶ್ರಮ ಮತ್ತು ಸಹಕಾರದ ಮೂಲಕ ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಅವರ ಸೇವೆ ಮತ್ತು ಪರಿಶ್ರಮವನ್ನು ಸ್ಮರಿಸುವುದು ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅತ್ಯಂತ ಸೂಕ್ತವಾಗಿದೆ ಎಂದು ಹೇಳಿದರು.
ಸಹಕಾರಿ ಕ್ಷೇತ್ರವು ಮತ್ತಷ್ಟು ಬಲಿಷ್ಠವಾಗುವುದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಬದಲಾಗುತ್ತಿರುವ ಕೃಷಿ ಪರಿಸ್ಥಿತಿಗೆ ಅನುಗುಣವಾಗಿ ಸಹಕಾರಿ ಸಂಸ್ಥೆಗಳು ಆಧುನಿಕ ಸೇವೆಗಳನ್ನು ಅಳವಡಿಸಿಕೊಂಡು ರೈತರ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡುವ ಅಗತ್ಯವಿದೆ. ರೈತರಿಗೆ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಸೇವೆ ದೊರೆಯುವಂತೆ ಸಂಘಗಳು ಮುಂದುವರಿಯಬೇಕು ಎಂದು ಶಾಸಕ ಶಿವಾನಂದ ಪಾಟೀಲ ಆಶಿಸಿದರು.
ಇವಣಗಿ ಸಹಕಾರ ಸಂಘವು 50 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಹಿನ್ನೆಲೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು, ಸಿಬ್ಬಂದಿ, ರೈತ ಬಾಂಧವರು ಹಾಗೂ ಇವಣಗಿ ಗ್ರಾಮದ ಸಮಸ್ತ ಜನತೆಗೆ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.
ಮುಂದಿನ ದಿನಗಳಲ್ಲಿಯೂ ಇವಣಗಿ ಸಹಕಾರ ಸಂಘವು ಇನ್ನಷ್ಟು ಬಲಿಷ್ಠವಾಗಿ ಬೆಳೆದು, ರೈತ ಸಮುದಾಯದ ಆರ್ಥಿಕ ಅಭಿವೃದ್ಧಿಗೆ ಹಾಗೂ ಕೃಷಿ ಚಟುವಟಿಕೆಗಳ ಉತ್ತೇಜನಕ್ಕೆ ಮತ್ತಷ್ಟು ಪರಿಣಾಮಕಾರಿ ಕೊಡುಗೆ ನೀಡಲಿ ಎಂದು ಅವರು ಶುಭ ಹಾರೈಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande