ಬರಪೀಡಿತ ತಾಲೂಕುಗಳ ಗುರುತಿಸುವಿಕೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ: ವಿಜಯೇಂದ್ರ
ಬೆಂಗಳೂರು, 21 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಬರಪೀಡಿತ ಪ್ರದೇಶಗಳನ್ನು ಗುರುತಿಸುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ
ವಿಜಯೇಂದ್ರ ಸಂಗ್ರಹ ಚಿತ್ರ


ಬೆಂಗಳೂರು, 21 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಬರಪೀಡಿತ ಪ್ರದೇಶಗಳನ್ನು ಗುರುತಿಸುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸೋಮವಾರ ಹೇಳಿಕೆ ನೀಡಿರುವ ಅವರು, ಬದ್ಧತೆ ಇಲ್ಲದ ತಜ್ಞರು, ಕೃಷಿ ಸಂಕಷ್ಟವನ್ನು ಅರಿಯದ ಅಧಿಕಾರಿಗಳು ಹಾಗೂ ವಾಸ್ತವ ಸ್ಥಿತಿಯನ್ನು ಅವಲೋಕಿಸದ ಸರ್ಕಾರದ ವ್ಯವಸ್ಥೆಯಿಂದಾಗಿ ಬರಪೀಡಿತ ತಾಲೂಕುಗಳ ಗುರುತಿಸುವಿಕೆಯಲ್ಲಿ ತೀವ್ರ ನಿರ್ಲಕ್ಷ್ಯವಾಗಿದೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ, ಶಾಸಕ ಎಚ್.ಕೆ. ಪಾಟೀಲ್ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರವೇ ಸರ್ಕಾರದ ದುರವಸ್ಥೆಗೆ ಕನ್ನಡಿ ಹಿಡಿದಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

‘ಬಳ್ಳಾರಿ ಚಲೋ’ ಪಾದಯಾತ್ರೆ ಆರಂಭಿಸಿದ ಬಳಿಕ ಮುಖ್ಯಮಂತ್ರಿ ಎಚ್ಚೆತ್ತುಕೊಂಡು ರೈತರ ಕಣ್ಣಿಗೆ ಮಣ್ಣೆರೆಚುವ ರೀತಿಯಲ್ಲಿ ಹೆಲಿಕಾಪ್ಟರ್‌ನಲ್ಲಿ ಸಂಚರಿಸಿದರು. ಎಚ್.ಕೆ. ಪಾಟೀಲ್ ಪ್ರತಿನಿಧಿಸುವ ಗದಗ ಕ್ಷೇತ್ರಕ್ಕೂ ನೆಪಮಾತ್ರಕ್ಕೆ ಭೇಟಿ ನೀಡಿ, ರೈತರ ಹೊಲದಲ್ಲಿ ಕುಳಿತು ಮಾಧ್ಯಮಗಳ ಗಮನ ಸೆಳೆಯುವ ಮೂಲಕ ಬರದ ವಿಷಯದಲ್ಲೂ ಪ್ರಚಾರ ಪಡೆಯುವ ನಾಟಕವಾಡಿದರು ಎಂದು ಅವರು ಆರೋಪಿಸಿದ್ದಾರೆ.

ಗದಗ ಜಿಲ್ಲೆಯನ್ನು ಬರಪೀಡಿತ ಪ್ರದೇಶಗಳ ಗುರುತಿಸುವಿಕೆಯಲ್ಲಿ ನಿರ್ಲಕ್ಷಿಸಿರುವುದೇ ಇದಕ್ಕೆ ಸಾಕ್ಷಿ ಎಂದು ವಿಜಯೇಂದ್ರ ಹೇಳಿದ್ದಾರೆ.

ಈ ಹಿಂದೆ ಸಿ.ಎಸ್. ನಾಡಗೌಡರು ಬರಪೀಡಿತ ಪ್ರದೇಶಗಳ ಗುರುತಿಸುವಿಕೆಯಲ್ಲಿನ ತಾರತಮ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಎಚ್.ಕೆ. ಪಾಟೀಲ್ ಅವರಂತಹ ಅನುಭವಿ ಹಿರಿಯ ಶಾಸಕರೂ ಸರ್ಕಾರದ ಧೋರಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಪಕ್ಷದ ಶಾಸಕರ ಕ್ಷೇತ್ರಗಳ ಪರಿಸ್ಥಿತಿಯನ್ನೇ ಸರ್ಕಾರ ನಿರ್ಲಕ್ಷಿಸುತ್ತಿದ್ದರೆ, ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಸ್ಥಿತಿಯನ್ನು ಊಹಿಸುವುದೂ ಕಷ್ಟ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸರ್ಕಾರದ ವ್ಯವಸ್ಥೆಯಲ್ಲಿ ಅಧಿಕಾರಿಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆಯೇ ಅಥವಾ ಬರಪೀಡಿತ ಪ್ರದೇಶಗಳ ರೈತರ ಬಗ್ಗೆ ಉಡಾಫೆಯ ಮನೋಭಾವ ತಾಳಿದ್ದಾರೆಯೇ ಎಂಬ ಗೊಂದಲ ಕಾಂಗ್ರೆಸ್ ಶಾಸಕರನ್ನೇ ಕಾಡುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಬಡವರು ಹಾಗೂ ರೈತರ ಕಲ್ಯಾಣ ಕಾರ್ಯಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಆದ್ಯತೆಯಾಗಿಲ್ಲ ಎಂಬುದು ಅವರ ನಡವಳಿಕೆಗಳು ಮತ್ತು ಕಾರ್ಯಕ್ರಮಗಳನ್ನು ಗಮನಿಸಿದರೆ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ರೈತರು ಹಾಗೂ ಗ್ರಾಮೀಣ ಭಾಗದ ಬಡವರ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಧೋರಣೆ ಮುಂದುವರಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಬರದ ಹೆಸರಿನಲ್ಲಿ ನಡೆಯುತ್ತಿರುವ ತೋರಿಕೆಯ ನಡವಳಿಕೆಯನ್ನು ಅರ್ಥಮಾಡಿಕೊಳ್ಳದಷ್ಟು ರಾಜ್ಯದ ರೈತರು ಮುಗ್ಧರಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.

ವಿಶೇಷ ಅಧಿವೇಶನವನ್ನು ನೆಪಮಾತ್ರಕ್ಕೆ ಕರೆಯದೆ, ಬರಪೀಡಿತ ಜನರ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು. ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಹಾಗೂ ಅನ್ನದಾತರ ಸಂಕಷ್ಟದ ಮೇಲೆ ರಾಜಕೀಯ ಮಾಡದೆ ತಕ್ಷಣ ಅಗತ್ಯ ನೆರವು ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇಲ್ಲದಿದ್ದರೆ ರೈತರ ಪರವಾಗಿ ಹೋರಾಟ ನಡೆಸುವುದಾಗಿ ತಿಳಿಸಿರುವ ವಿಜಯೇಂದ್ರ, ಪಕ್ಷ ರಾಜಕಾರಣವನ್ನು ಬದಿಗಿಟ್ಟು ಬರಪೀಡಿತ ಪ್ರದೇಶಗಳ ಸಂಕಷ್ಟವನ್ನು ಕಣ್ಣಾರೆ ಕಾಣುತ್ತಿರುವ ಕಾಂಗ್ರೆಸ್ ಶಾಸಕರೂ ಸದನದಲ್ಲಿ ರೈತರ ಪರ ದನಿಗೂಡಿಸಬೇಕು ಎಂದು ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande