
ನವದೆಹಲಿ, 20 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಹವಾಮಾನ ಬದಲಾವಣೆಯಿಂದ ಎದುರಾಗುತ್ತಿರುವ ಸವಾಲುಗಳ ನಡುವೆಯೇ ಜಲ ಭದ್ರತೆ ಹಾಗೂ ಜಲ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ಉದ್ದೇಶದ 9ನೇ ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ ಸೆ.22ರಿಂದ ಆರಂಭವಾಗಲಿದೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಸೆ.22ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಐದು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಜಲ ನಿರ್ವಹಣೆ, ಜಲ ಸಂಪನ್ಮೂಲಗಳ ಸುಸ್ಥಿರ ಬಳಕೆ, ತಂತ್ರಜ್ಞಾನ, ಹಣಕಾಸು ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಜಲ ಭದ್ರತೆಯನ್ನು ಬಲಪಡಿಸುವ ಕುರಿತು ಚರ್ಚೆಗಳು ನಡೆಯಲಿವೆ.
ಕೇಂದ್ರ ಜಲಶಕ್ತಿ ಸಚಿವಾಲಯದ ನೇತೃತ್ವದಲ್ಲಿ ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕಾ ಸಂಘಟನೆಗಳು, ಅಭಿವೃದ್ಧಿ ಪಾಲುದಾರರು, ನಾಗರಿಕ ಸಮಾಜ ಹಾಗೂ ಖಾಸಗಿ ವಲಯದ ಸಹಯೋಗದಲ್ಲಿ ಸೆ.22ರಿಂದ 26ರವರೆಗೆ ಭಾರತ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕೇಂದ್ರ ಜಲಶಕ್ತಿ ಸಚಿವರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ವರ್ಷದ ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹದ ವಿಷಯ ‘ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಜಲ ನಿರ್ವಹಣೆ’ ಎಂಬುದಾಗಿದೆ. ನೀತಿ ನಿರೂಪಕರು, ಜಾಗತಿಕ ಜಲ ಕ್ಷೇತ್ರದ ತಜ್ಞರು, ಸಂಶೋಧಕರು, ಜಲ ನಿರ್ವಹಣಾ ವೃತ್ತಿಪರರು, ಕೈಗಾರಿಕಾ ಪ್ರತಿನಿಧಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳು, ನವೋದ್ಯಮಗಳು ಹಾಗೂ ಯುವಕರಿಗೆ ಸಂವಾದ ಮತ್ತು ಅನುಭವ ಹಂಚಿಕೊಳ್ಳಲು ವೇದಿಕೆ ಕಲ್ಪಿಸಲಾಗುತ್ತದೆ.
ನೆದರ್ಲೆಂಡ್ಸ್ ಮತ್ತು ಜರ್ಮನಿ ಕಾರ್ಯಕ್ರಮದ ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸಲಿವೆ. ಇದರೊಂದಿಗೆ ಭಾರತದ 14 ರಾಜ್ಯಗಳು ಪಾಲುದಾರ ರಾಜ್ಯಗಳಾಗಿ ಪಾಲ್ಗೊಳ್ಳಲಿವೆ. ಆರು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳನ್ನೂ ಪಾಲುದಾರ ಸಚಿವಾಲಯಗಳು ಹಾಗೂ ಇಲಾಖೆಗಳಾಗಿ ಸೇರಿಸಲಾಗಿದೆ. ಇದರ ಮೂಲಕ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಜಲ ನಿರ್ವಹಣೆಗಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರ ಹಾಗೂ ವಿವಿಧ ಕ್ಷೇತ್ರಗಳ ನಡುವಿನ ಸಮನ್ವಯಕ್ಕೆ ಒತ್ತು ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ 10 ಪ್ರಮುಖ ವೇದಿಕೆಗಳಲ್ಲಿ ಚರ್ಚೆಗಳು ನಡೆಯಲಿವೆ. ಸಚಿವರ ಪೂರ್ಣ ಅಧಿವೇಶನ, ಜಾಗತಿಕ ಜಲ ನಾಯಕರ ಪೂರ್ಣ ಅಧಿವೇಶನ, ದೇಶವಾರು ವೇದಿಕೆ, ಜಲ ನಾಯಕರ ವೇದಿಕೆ, ಜಲ ಕ್ಷೇತ್ರದ ವೃತ್ತಿಪರರ ವೇದಿಕೆ, ವಿಷಯಾಧಾರಿತ ವೇದಿಕೆ, ನವೋದ್ಯಮಗಳ ವೇದಿಕೆ, ಯುವ ವೇದಿಕೆ, ಕೈಗಾರಿಕಾ ವೇದಿಕೆ ಹಾಗೂ ವಿವಿಧ ಉಪ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ.
ಏಳು ಪ್ರಮುಖ ಉಪವಿಷಯಗಳ ಕುರಿತು ಚರ್ಚೆ
ಸಮಾವೇಶದಲ್ಲಿ ಏಳು ಪ್ರಮುಖ ಉಪವಿಷಯಗಳನ್ನು ನಿಗದಿಪಡಿಸಲಾಗಿದೆ. ಸಮಗ್ರ ಮತ್ತು ಸಮಾನ ಜಲ ಆಡಳಿತ, ಜಲ ಸಂಪನ್ಮೂಲಗಳ ಉತ್ತಮ ಬಳಕೆಗಾಗಿ ಸಹಕಾರ, ಜಲ ಭದ್ರತೆಗಾಗಿ ತಂತ್ರಜ್ಞಾನ ಮತ್ತು ಸಮುದಾಯದ ಪಾತ್ರ, ಜಲ ಹಾಗೂ ಹವಾಮಾನ ಸಂಬಂಧಿತ ಅಪಾಯಗಳು, ಜಲ ಮೂಲಸೌಕರ್ಯಕ್ಕಾಗಿ ನವೀನ ಹಣಕಾಸು ಮಾದರಿಗಳು ಮತ್ತು ಆಧುನೀಕರಣ, ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆ ಹಾಗೂ ಜನರು ಮತ್ತು ಪರಿಸರಕ್ಕಾಗಿ ಜಲ ಎಂಬ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸೆ.22ರಿಂದ 25ರವರೆಗೆ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಪ್ರದರ್ಶನವೂ ನಡೆಯಲಿದೆ. ಸುಸ್ಥಿರ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಜಲ ನಿರ್ವಹಣೆಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ಪರಿಹಾರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಇದೇ ವೇಳೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವತಿಯಿಂದ ಸೆ.22ರಿಂದ 24ರವರೆಗೆ ಎರಡನೇ ಅಂತಾರಾಷ್ಟ್ರೀಯ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ ಸಮ್ಮೇಳನವೂ ನಡೆಯಲಿದೆ. ಕುಡಿಯುವ ನೀರಿನ ಲಭ್ಯತೆ, ನೈರ್ಮಲ್ಯ ಮೂಲಸೌಕರ್ಯ, ನೈರ್ಮಲ್ಯ ಸಂಬಂಧಿತ ನಡವಳಿಕೆಗಳು ಹಾಗೂ ಜನಾರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಅಳವಡಿಸಬಹುದಾದ, ಕೈಗೆಟುಕುವ ಹಾಗೂ ಸುಸ್ಥಿರ ಪರಿಹಾರಗಳಿಗೆ ಒತ್ತು ನೀಡಲಾಗುತ್ತದೆ.
ಚರ್ಚೆಗಳನ್ನು ಕೇವಲ ವಿಚಾರ ವಿನಿಮಯಕ್ಕೆ ಸೀಮಿತಗೊಳಿಸದೆ, ಅನುಷ್ಠಾನಗೊಳಿಸಬಹುದಾದ ಸಲಹೆಗಳು, ಸಹಭಾಗಿತ್ವಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ಅಳವಡಿಸಬಹುದಾದ ಪರಿಹಾರಗಳಾಗಿ ಪರಿವರ್ತಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ನೀತಿ, ಹಣಕಾಸು, ತಂತ್ರಜ್ಞಾನ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಒಗ್ಗೂಡಿಸುವ ಮೂಲಕ ಜಲ ಭದ್ರತೆ ಹಾಗೂ ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸಲು ಒತ್ತು ನೀಡಲಾಗುತ್ತದೆ.
ಸೆ.25ರಂದು ಸಮಾರೋಪ ಅಧಿವೇಶನ ನಡೆಯಲಿದ್ದು, ಸೆ.26ರಂದು ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುತ್ತದೆ. ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹವನ್ನು ಜಲ ಕ್ಷೇತ್ರದಲ್ಲಿ ಭಾರತ ಮತ್ತು ವಿಶ್ವದ ವಿವಿಧ ಪಾಲುದಾರರ ನಡುವೆ ಅನುಭವ ಹಂಚಿಕೆ, ಹೊಸ ತಂತ್ರಜ್ಞಾನಗಳ ಪರಿಚಯ ಹಾಗೂ ಸಹಕಾರ ವೃದ್ಧಿಗೆ ಪ್ರಮುಖ ವೇದಿಕೆಯಾಗಿ ರೂಪಿಸಲಾಗುತ್ತಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.