
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಉತ್ತರ ಅಂಡಮಾನ್ ಸಮುದ್ರ ಹಾಗೂ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ಕಡಿಮೆ ಒತ್ತಡದ ಪ್ರದೇಶದ ಪ್ರಭಾವದಿಂದ ಇಂದಿನಿಂದ 24ರವರೆಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಅಂಡಮಾನ್ ಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಕಡಿಮೆ ಒತ್ತಡದ ಪ್ರದೇಶವು ಪಶ್ಚಿಮ-ವಾಯುವ್ಯ ದಿಕ್ಕಿನತ್ತ ಚಲಿಸಿದ್ದು, ಸೆ.20ರ ಬೆಳಿಗ್ಗೆ 5.30ಕ್ಕೆ ಉತ್ತರ ಅಂಡಮಾನ್ ಸಮುದ್ರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ನೆಲೆಗೊಂಡಿದೆ.
ಇದರೊಂದಿಗೆ ಸಂಯೋಜಿತವಾಗಿರುವ ಚಕ್ರವಾತ ಪರಿಚಲನೆಯು ಸಮುದ್ರಮಟ್ಟದಿಂದ 5.8 ಕಿ.ಮೀ. ಎತ್ತರದವರೆಗೆ ವಿಸ್ತರಿಸಿದೆ ಎಂದು ಇಲಾಖೆ ಹೇಳಿದೆ.
ಸೆ.21ರಂದು ವಾಯುಭಾರ ಕುಸಿತ: ಈ ಹವಾಮಾನ ವ್ಯವಸ್ಥೆಯು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಾ ಕ್ರಮೇಣ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಸೆ.21ರಂದು ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಹಾಗೂ ಸೆ.22ರಂದು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತವಾಗಿ ಮಾರ್ಪಡುವ ಸಾಧ್ಯತೆ ಇದೆ.
ಮುಂದುವರಿದು ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಚಲಿಸುವ ವ್ಯವಸ್ಥೆಯು ಸೆ.23ರ ಬೆಳಿಗ್ಗೆ ದಕ್ಷಿಣ ಒಡಿಶಾ–ಉತ್ತರ ಆಂಧ್ರಪ್ರದೇಶ ಕರಾವಳಿಯ ಸಮೀಪದ ಪಶ್ಚಿಮ-ಮಧ್ಯ ಹಾಗೂ ಅದಕ್ಕೆ ಹೊಂದಿಕೊಂಡಿರುವ ವಾಯುವ್ಯ ಬಂಗಾಳ ಕೊಲ್ಲಿಯನ್ನು ತಲುಪುವ ಸಾಧ್ಯತೆ ಇದೆ.
ರಾಜ್ಯದಲ್ಲಿ ವ್ಯಾಪಕ ಮಳೆ: ಈ ಹವಾಮಾನ ವ್ಯವಸ್ಥೆಯ ಪರಿಣಾಮವಾಗಿ ಸೆ.20ರಿಂದ 24ರವರೆಗೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.---------------
ಹಿಂದೂಸ್ತಾನ್ ಸಮಾಚಾರ್ / BHARGAVI G R