
ಬೆಂಗಳೂರು, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ರೈತರ ಸಮಸ್ಯೆಗಳು ಹಾಗೂ ಪಶ್ಚಿಮಘಟ್ಟದ ಕಸ್ತೂರಿರಂಗನ್ ವರದಿ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲು ರಾಜ್ಯ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನ ಸೋಮವಾರದಿಂದ ಆರಂಭವಾಗಲಿದೆ.
ಸೆ.21ರಿಂದ 23ರವರೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ವಿಶೇಷ ಅಧಿವೇಶನ ನಡೆಯಲಿದೆ. ಈ ಕುರಿತು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಅಧಿಕೃತ ವೇಳಾಪಟ್ಟಿ ಪ್ರಕಟಿಸಿದೆ.
ವಿಶೇಷ ಅಧಿವೇಶನದಲ್ಲಿ ರಾಜ್ಯದ ಬರ ಪರಿಸ್ಥಿತಿ, ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ, ರೈತರ ಸಂಕಷ್ಟ ಹಾಗೂ ಕೇಂದ್ರದಿಂದ ಬರಬೇಕಿರುವ ಪರಿಹಾರ ಕುರಿತು ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಪ್ರಶ್ನೋತ್ತರ ಕಲಾಪವಿಲ್ಲದೆ ಪ್ರಮುಖ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಗೆ ಅಧಿವೇಶನವನ್ನು ಮೀಸಲಿಡಲಾಗಿದೆ.
ಪಶ್ಚಿಮಘಟ್ಟ ಪ್ರದೇಶಕ್ಕೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಕೂಡ ಅಧಿವೇಶನದ ಪ್ರಮುಖ ಚರ್ಚಾ ವಿಷಯವಾಗಲಿದೆ. ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗಗಳ ಕೃಷಿ, ಮೂಲಸೌಕರ್ಯ ಮತ್ತು ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸದಸ್ಯರು ಚರ್ಚೆ ನಡೆಸಲಿದ್ದಾರೆ.
“ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿ, ರೈತರ ಸಮಸ್ಯೆಗಳು, ಮಳೆ ಕೊರತೆ, ಕುಡಿಯುವ ನೀರು, ಮೇವು ಪೂರೈಕೆ ಹಾಗೂ ಬರ ಪರಿಹಾರ ಸೇರಿದಂತೆ ಪ್ರಮುಖ ವಿಚಾರಗಳ ಕುರಿತು ವಿಶೇಷ ಅಧಿವೇಶನದಲ್ಲಿ ವ್ಯಾಪಕವಾಗಿ ಚರ್ಚಿಸಲಾಗುವುದು” ಎಂದು ಉಪಮುಖ್ಯಮಂತ್ರಿ ಪರಮೇಶ್ವರ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R