
ಬಾಗಲಕೋಟೆ, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಕಸಾಪ ಭವನದಲ್ಲಿ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು ಹಾಗೂ ರನ್ನ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ಕವಿ-ಕಾವ್ಯ ಸಮ್ಮೇಳನ ಹಾಗೂ ರತ್ನ ಸನ್ಮಾನ ಸಮಾರಂಭವು ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮವನ್ನು ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯವು ಸಮಾಜದ ಬದುಕಿನೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಕವಿಗಳ ಸೃಜನಶೀಲತೆ ಸಮಾಜದ ಆಶಯಗಳು, ನೋವು-ನಲಿವು ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕನ್ನಡ ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಪೂರಕವಾಗಿದ್ದು, ಯುವ ಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮಕ್ಕೆ ಲೋಕಾಪುರ ಹಿರೇಮಠದ ಚಂದ್ರಶೇಖರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸಂಘ-ಸಂಸ್ಥೆಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಕಾಶ ವಸ್ತ್ರದ ಅವರು ಉಪಸ್ಥಿತರಿದ್ದು, ಕವಿ-ಕಾವ್ಯ ಕ್ಷೇತ್ರದ ವಿವಿಧ ಆಯಾಮಗಳ ಕುರಿತು ಚಿಂತನೆಗಳನ್ನು ಹಂಚಿಕೊಂಡರು. ಕಾವ್ಯವು ಕೇವಲ ಮನರಂಜನೆಯ ಮಾಧ್ಯಮವಾಗದೆ, ಸಮಾಜದೊಂದಿಗೆ ಸಂವಾದ ನಡೆಸುವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದೆ ಎಂಬ ಸಂದೇಶ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ರತ್ನ ಸನ್ಮಾನ ನೀಡಿ ಗೌರವಿಸಲಾಯಿತು. ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂತಹ ಸನ್ಮಾನಗಳು ಮಹತ್ವದ್ದಾಗಿವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಡಾ. ಜಿ. ಶಿವಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶ ಹಾಗೂ ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ನ ವಿವಿಧ ಚಟುವಟಿಕೆಗಳ ಕುರಿತು ವಿವರಿಸಿದರು. ಕನ್ನಡ ಸಾಹಿತ್ಯ, ಕಾವ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಅಶೋಕ ಕುಲಕರ್ಣಿ, ಡಾ. ಸಿದ್ದಣ್ಣ ಬಾಡಗಿ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ನ ಜಿ. ಶಿವಣ್ಣ, ಹಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ, ರನ್ನ ಪ್ರತಿಷ್ಠಾನ ಸದಸ್ಯ ಕೆ.ಎಲ್. ಉದುಪುಡಿ, ವಿದ್ಯಾ ರೆಡ್ಡಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಶಶಿ ಟ್ರಸ್ಟ್ ಸಂಚಾಲಕ ಚಂದ್ರಶೇಖರ ದೇಸಾಯಿ, ಸಂಗಮೇಶ ನೀಲಗುಂದ, ರಮೇಶ ನಿಡೋಣಿ, ವಿ.ಆರ್. ಕಣಬೂರ ಸೇರಿದಂತೆ ಸಾಹಿತ್ಯಾಸಕ್ತರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಂಗೀತಾ ಮಠಪತಿ ಅವರು ಸ್ವಾಗತಿಸಿದರು. ಕವಿ-ಕಾವ್ಯ ಸಮ್ಮೇಳನವು ಕವಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳ ನಡುವೆ ಉತ್ತಮ ಸಂವಾದಕ್ಕೆ ವೇದಿಕೆಯಾಗಿ, ಮುಧೋಳದ ಸಾಹಿತ್ಯ ವಲಯದಲ್ಲಿ ಗಮನ ಸೆಳೆಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande