
ಚಿತ್ರದುರ್ಗ, 20 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಬಹುನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯಡಿ ಅಗತ್ಯ ಅರಣ್ಯ ಇಲಾಖೆಯ ಅನುಮತಿ ಹಾಗೂ ವಿದ್ಯುತ್ ಟವರ್ಗಳ ಎರೆಕ್ಷನ್ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ನವೆಂಬರ್ ಅಂತ್ಯದ ವೇಳೆಗೆ ತುಂಗಾ ನದಿಯಿಂದ 17.5 ಟಿಎಂಸಿ ನೀರನ್ನು ಲಿಫ್ಟ್ ಮಾಡಿ ನಿಗದಿತ ಕೆರೆಗಳಿಗೆ ಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಹಿರಿಯೂರು ತಾಲೂಕಿನ ಐಮಂಗಲ ಸಮೀಪ ಚಿತ್ರದುರ್ಗ ಶಾಖಾ ಕಾಲುವೆಯಡಿ ಪ್ರಾಯೋಗಿಕವಾಗಿ ನೀರು ಹರಿದ ಕೆರೆಗಳನ್ನು ವೀಕ್ಷಿಸಿದ ಸಚಿವರು, ಆದ್ರಾಳು ಬಳಿಯ 82ನೇ ಕಿ.ಮೀ. ವ್ಯಾಪ್ತಿಯಲ್ಲಿ ಹರಿಯುತ್ತಿರುವ ಭದ್ರಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಬರಪೀಡಿತ ಪ್ರದೇಶಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಗುರುತ್ವಾಕರ್ಷಣೆಯ ಬಲದಿಂದ ನೀರು ಸರಾಗವಾಗಿ ಹರಿಯುವ ಮೊದಲ ಹಂತದ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಉಳಿದ ಕೆರೆಗಳಿಗೂ ಕಾಲುವೆಗಳ ಮೂಲಕ ನೀರು ತಲುಪಿಸಲು ಇನ್ನೂ ಎರಡು ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದು ಹೇಳಿದರು.ರೈತರು ಸಹಕರಿಸುವಂತೆ ಮನವಿಕಾಲುವೆಗಳನ್ನು ಒಡೆಯುವುದು ಅಥವಾ ಆತುರದಲ್ಲಿ ಸಂಘರ್ಷಕ್ಕೆ ಇಳಿಯುವುದನ್ನು ಬಿಟ್ಟು ರೈತರು ತಾಳ್ಮೆಯಿಂದ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
“ಏನೇ ಕಷ್ಟವಾದರೂ ಸರಿ, ಆರ್ಥಿಕ ಭಾರ ಎಷ್ಟೇ ಆದರೂ ಸರಿ, ಈ ಭಾಗದ ಎಲ್ಲ ಕೆರೆಗಳಿಗೂ ನೀರು ಮುಟ್ಟಿಸುವ ಪ್ರಾಮಾಣಿಕ ಕೆಲಸವನ್ನು ಸರ್ಕಾರ ಮಾಡಲಿದೆ. ರೈತರು ಸಮಾಧಾನದಿಂದ ಇರಬೇಕು,” ಎಂದರು.
ಮಾರ್ಗಮಧ್ಯೆ ಎಲ್ಲಪುರನಹಳ್ಳಿ ಹಾಗೂ ಐಮಂಗಲ ಭಾಗದ ಗ್ರಾಮಸ್ಥರು ತಮ್ಮೂರಿನ ಕೆರೆಗಳಿಗೂ ತುರ್ತಾಗಿ ನೀರು ಹರಿಸುವಂತೆ ಸಚಿವರ ವಾಹನ ತಡೆದು ಮನವಿ ಮಾಡಿದರು. ಗ್ರಾಮಸ್ಥರನ್ನು ಸಮಾಧಾನಪಡಿಸಿದ ಸಚಿವರು, ಕೆರೆಗಳೇ ಈ ಭಾಗದ ರೈತರ ಜೀವಾಳವಾಗಿದ್ದು, ಪ್ರತಿಯೊಂದು ಕೆರೆಗೂ ನೀರು ತಲುಪಿಸುವ ಹೊಣೆಗಾರಿಕೆಯನ್ನು ಸರ್ಕಾರ ನಿಭಾಯಿಸಲಿದೆ ಎಂದರು.
ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ದಾವಣಗೆರೆವರೆಗೆ ಬರುತ್ತಿದ್ದ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಇದೀಗ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ಒಟ್ಟು 12 ತಾಲೂಕುಗಳಿಗೆ ವಿಸ್ತರಿಸಲಾಗುತ್ತಿದೆ. ಜನರ ಭಾವನೆಗಳಿಗೆ ಬೆಲೆ ನೀಡಿ ಯೋಜನೆಯನ್ನು ಸಾಕಾರಗೊಳಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.
ಮಹಿಳೆಯರ ಭಾವುಕ ಕ್ಷಣನೀರು ಹರಿದ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯರು ಬಾಗಿನ ಅರ್ಪಿಸಿ, ಒಡವೆ-ವಸ್ತ್ರಗಳಿಗಿಂತ ಜೀವಜಲವೇ ದೊಡ್ಡ ವರ ಎಂದು ಸಂತಸ ವ್ಯಕ್ತಪಡಿಸಿದರು. ಇದರಿಂದ ಸಚಿವರು ಕೆಲಕಾಲ ಭಾವುಕರಾದರು.“ನಿಮ್ಮ ಈ ಖುಷಿ ನೋಡಿ ನನಗೆ ಅದಕ್ಕಿಂತ ಹೆಚ್ಚಿನ ಸಂತೋಷವಾಗಿದೆ. ಈ ಖುಷಿಯನ್ನು ಎಲ್ಲರ ಮೊಗದಲ್ಲೂ ನೋಡುವ ಹಂಬಲ ನನ್ನದು,” ಎಂದು ಅವರು ಹೇಳಿದರು.
ಸೆ.24ರಂದು ಡಿಸಿಎಂ ಗಂಗಾಪೂಜೆದಿವಂಗತ ಡಿ. ಸುಧಾಕರ್ ಅವರ ಕನಸಿನ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ₹500 ಕೋಟಿ ಅನುದಾನ ಬಿಡುಗಡೆಯಾಗಿದೆ. ಸೆ.24ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಗಂಗಾಪೂಜೆ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ರೈತರ ಬೇಡಿಕೆಗಳನ್ನು ಅವರ ಗಮನಕ್ಕೆ ತಂದು ಪ್ರಾಮಾಣಿಕವಾಗಿ ಈಡೇರಿಸಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದರು.
ಯೋಜನೆಯಿಂದ 367 ಕೆರೆಗಳಿಗೆ ನೀರುತುಂಗಾ ನದಿಯಿಂದ 17.5 ಟಿಎಂಸಿ ಹಾಗೂ ಭದ್ರಾ ನದಿಯಿಂದ 12.5 ಟಿಎಂಸಿ ಸೇರಿದಂತೆ ಒಟ್ಟು 30 ಟಿಎಂಸಿ ನೀರನ್ನು ಎತ್ತುವ ಗುರಿಯನ್ನು ಭದ್ರಾ ಮೇಲ್ದಂಡೆ ಯೋಜನೆ ಹೊಂದಿದೆ. ಇದರಲ್ಲಿ 22 ಟಿಎಂಸಿ ನೀರನ್ನು ಸೂಕ್ಷ್ಮ ನೀರಾವರಿಗೆ ಹಾಗೂ 6 ಟಿಎಂಸಿ ನೀರನ್ನು ಕೆರೆ ತುಂಬಿಸಲು ನಿಗದಿಪಡಿಸಲಾಗಿದೆ.ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ 12 ತಾಲೂಕುಗಳ ವ್ಯಾಪ್ತಿಯ 367 ಕೆರೆಗಳನ್ನು ತುಂಬಿಸಿ, ಸುಮಾರು 5 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ.
ಯೋಜನೆಯ ಪರಿಷ್ಕೃತ ಅಂದಾಜು ಮೊತ್ತ ₹21,500 ಕೋಟಿಯಾಗಿದ್ದು, ಈಗಾಗಲೇ ₹12,250 ಕೋಟಿ ವೆಚ್ಚವಾಗಿದೆ. ಚಿತ್ರದುರ್ಗ ಶಾಖಾ ಕಾಲುವೆಯ 135 ಕಿ.ಮೀ. ಪೈಕಿ 114 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ 199 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಬಾಕಿ ಇರುವ ಗೊಣೂರು ಅಕ್ವಾಡಕ್ಟ್ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಜಗಳೂರು, ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಪಾವಗಡ ಭಾಗಗಳಿಗೆ ನೀರು ವಿಸ್ತರಿಸುವ ಉದ್ದೇಶವಿದೆ.
ತುಮಕೂರು ಕಾಲುವೆ ಕಾಮಗಾರಿಯನ್ನೂ ಚುರುಕುಗೊಳಿಸಲಾಗುತ್ತಿದ್ದು, ಕೇಂದ್ರದಿಂದ ನಿರೀಕ್ಷಿಸಲಾಗಿರುವ ₹5,300 ಕೋಟಿ ಅನುದಾನ ಬಿಡುಗಡೆಯಾಗದಿದ್ದರೂ ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಯೋಜನೆಯನ್ನು ಮಾರ್ಚ್ 2028ರ ವೇಳೆಗೆ ಸಂಪೂರ್ಣಗೊಳಿಸುವ ಗುರಿ ಹೊಂದಿದೆ ಎಂದು ಸಚಿವರು ತಿಳಿಸಿದರು.
ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸ್ವಯಾರ್ಜಿತ ಆಸ್ತಿಯಿಂದಲೇ ರೈತರ ಸಾಲಮನ್ನಾ ಮಾಡಬಹುದು ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, “ಡಿಕೆಶಿಗಿಂತ ನಾಲ್ಕು ಪಟ್ಟು ಆಸ್ತಿ ಎಚ್.ಡಿ. ಕುಮಾರಸ್ವಾಮಿ ಅವರಿಗಿದೆ. ಏರ್ಪೋರ್ಟ್ ರಸ್ತೆ, ನೆಲಮಂಗಲದಲ್ಲಿ ಅವರದ್ದೇ ಆಸ್ತಿ ಇದೆ. ಅವರು ಸಾಲಮನ್ನಾ ಮಾಡಿ ಓಡಿ ಹೋದವರು. ಅದಕ್ಕೆ ಹಣ ಹೊಂದಿಸಿದ್ದು ಸಿದ್ದರಾಮಯ್ಯ ಅವರು,” ಎಂದು ಆರೋಪಿಸಿದರು.
“ಎಚ್.ಡಿ. ಕುಮಾರಸ್ವಾಮಿ ಅವರು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾದವರಲ್ಲ. ಅವರ ಬಗ್ಗೆ ಮಾತನಾಡುವುದಕ್ಕಿಂತ ಬೇರೆ ಕೆಲಸ ಮಾಡಬಹುದು,” ಎಂದರು.
ವಂದೇ ಮಾತರಂ ಗೀತೆಯ ಸುತ್ತ ಎದ್ದಿರುವ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿದ ಸಚಿವರು, ನೈತಿಕತೆ ಇಲ್ಲದವರ ಹೇಳಿಕೆಗಳಿಗೆ ಸರ್ಕಾರ ಕಿವಿಗೊಡುವುದಿಲ್ಲ ಎಂದು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R