
ಮದ್ದುರು, 02 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ತಾಲೂಕಿನ ಕೊಪ್ಪ ಸಮೀಪದ ಬೆಕ್ಕಳಲೆ ಗ್ರಾಮದಲ್ಲಿ ಕೆಲಕಾಲದಿಂದ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆಸಿಕ್ಕಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.ಬೆಕ್ಕಳಲೆ ಗ್ರಾಮದ ನಿವಾಸಿ ಗೌರಮ್ಮ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ.
ಸೆರೆಸಿಕ್ಕಿರುವ ಚಿರತೆ ಸುಮಾರು 4 ವರ್ಷ ಪ್ರಾಯದ ಹೆಣ್ಣು ಜಾತಿಯದ್ದಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆಯ ಹಾವಳಿ ತೀವ್ರವಾಗಿ ಮೀತಿ ಮೀರಿದ್ದು, ರೈತರು ಹಾಗೂ ಜಾನುವಾರು ಮಾಲೀಕರು ಆತಂಕದ ನೆರಳಿನಲ್ಲಿ ಜೀವನ ನಡೆಸುತ್ತಿದ್ದರು. ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಚಿರತೆ ಪ್ರತ್ಯಕ್ಷಗೊಳ್ಳುತ್ತಿರುವುದರಿಂದ ರೈತರು ಕೃಷಿ ಕೆಲಸಗಳಿಗೆ ತೆರಳಲು ಭಯಪಡುವಂತಾಗಿತ್ತು.ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕೂಡಲೇ ಚಿರತೆಯನ್ನು ಸೆರೆಹಿಡಿಯುವಂತೆ ಆಗ್ರಹಿಸಿ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗೌರಮ್ಮ ಅವರ ಜಮೀನಿನಲ್ಲಿ ಚಿರತೆ ಸೆರೆಗೆ ಬೋನು ಅಳವಡಿಸಿದ್ದರು. ಇಂದು ಮುಂಜಾನೆ ಜಮೀನಿನಲ್ಲಿಟ್ಟಿದ್ದ ಬೋನಿನೊಳಗೆ ಚಿರತೆ ಆಹಾರ ಅರಸಿ ಬಂದು ಸಿಲುಕಿಕೊಂಡಿದೆ.
ಬೆಳಗಿನ ಜಾವ ಬೋನಿಗೆ ಚಿರತೆ ಬಿದ್ದಿರುವ ಶಬ್ದ ಹಾಗೂ ಸೆರೆಸಿಕ್ಕಿರುವುದನ್ನು ಖಚಿತಪಡಿಸಿಕೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R