
ಬೆಂಗಳೂರು, 02ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪರಿಷ್ಕೃತ ಕನಿಷ್ಠ ವೇತನದ ಅಂತಿಮ ಅಧಿಸೂಚನೆಯನ್ನು ತಕ್ಷಣ ಜಾರಿಗೊಳಿಸುವಂತೆ ಒತ್ತಾಯಿಸಿ ಎಐಯುಟಿಯುಸಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕರು ಬೃಹತ್ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳು, ವಿದ್ಯುತ್ ಕ್ಷೇತ್ರ ಹಾಗೂ ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರು ರಾಜ್ಯದ ವಿವಿಧ ಜಿಲ್ಲೆಗಳಿಂದ ಹರಿದುಬಂದು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಮೇ 22, 2026 ರಿಂದ ಅನ್ವಯವಾಗುವಂತೆ ಹೊರಡಿಸಲಾಗಿದ್ದ ಕನಿಷ್ಠ ವೇತನ ಅಧಿಸೂಚನೆಯನ್ನು ಸರ್ಕಾರವು ತಡೆಹಿಡಿದಿರುವುದಕ್ಕೆ ಕಾರ್ಮಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಲೆ ಏರಿಕೆ ಮತ್ತು ವಿಪರೀತ ಹಣದುಬ್ಬರದ ಈ ಸಂದರ್ಭದಲ್ಲಿ ಬದುಕು ನಡೆಸುವುದು ಕಷ್ಟವಾಗಿದ್ದು, ಉದ್ಯಮಪತಿಗಳ ಒತ್ತಡಕ್ಕೆ ಮಣಿದು ಸರ್ಕಾರ ಅಧಿಸೂಚನೆ ಜಾರಿಗೊಳಿಸುವುದನ್ನು ವಿಳಂಬ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜನಪ್ರತಿನಿಧಿಗಳು ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳಲು ಹಣವಿರುತ್ತದೆ, ಆದರೆ ಬಡ ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ನೀಡಲು ಸರ್ಕಾರದ ಬಳಿ ಹಣವಿಲ್ಲವೇ? ಎಂದು ಮುಖಂಡರು ಖಾರವಾಗಿ ಪ್ರಶ್ನಿಸಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R