ವಿದೇಶದಲ್ಲಿ ಅಧ್ಯಯನ-2026 ಕಾರ್ಯಕ್ರಮ
ಗದಗ, 02 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಜಾಗತಿಕ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ‘ವಿದೇಶದಲ್ಲಿ ಅಧ್ಯಯನ-2026’ ಕಾರ್ಯಕ
ಫೋಟೋ


ಗದಗ, 02 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಜಾಗತಿಕ ಶಿಕ್ಷಣದ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ‘ವಿದೇಶದಲ್ಲಿ ಅಧ್ಯಯನ-2026’ ಕಾರ್ಯಕ್ರಮವನ್ನು ಸೆಪ್ಟೆಂಬರ್ 6ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮವು ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವ ಕುರಿತು ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಿದೆ.

ಬೆಂಗಳೂರಿನ ಗೇಟ್ ನಂ.4, ಗಾಯತ್ರಿ ಗ್ರೌಂಡ್, ಗಾಯತ್ರಿ ವಿಹಾರ ಪ್ಯಾಲೇಸ್ ಗ್ರೌಂಡ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ವಿದೇಶಗಳ 75ಕ್ಕೂ ಅಧಿಕ ಜಾಗತಿಕ ವಿಶ್ವವಿದ್ಯಾಲಯಗಳು ಭಾಗವಹಿಸಲಿವೆ.

ವಿದೇಶದಲ್ಲಿ ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳ ಪ್ರವೇಶ ಪ್ರಕ್ರಿಯೆ, ವಿದ್ಯಾರ್ಥಿ ವೀಸಾ, ಹಣಕಾಸು ಯೋಜನೆ, ಅರ್ಜಿ ಸಲ್ಲಿಕೆ, ಆರೋಗ್ಯ ವಿಮೆ ಹಾಗೂ ಭಾಷಾ ನೈಪುಣ್ಯತೆ ಸೇರಿದಂತೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಒಂದೇ ವೇದಿಕೆಯಲ್ಲಿ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ.

ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಮಾಲೋಚನೆ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸಮಾಲೋಚನಾ ಅವಧಿ, ಸ್ಥಳದಲ್ಲಿಯೇ ವಿದ್ಯಾರ್ಥಿವೇತನದ ಅವಕಾಶ ಹಾಗೂ ಅರ್ಹತಾ ಪರಿಶೀಲನೆ, ವಿಶ್ವವಿದ್ಯಾಲಯ ಪ್ರವೇಶ ಮಾರ್ಗದರ್ಶನ, ವೀಸಾ ಮಾರ್ಗದರ್ಶನ, ಹಣಕಾಸು ಯೋಜನೆ, ಅರ್ಜಿ ಸಲ್ಲಿಕೆಗೆ ನೆರವು, ಆರೋಗ್ಯ ವಿಮೆ ಕುರಿತು ಮಾರ್ಗದರ್ಶನ ಮತ್ತು ಭಾಷಾ ನೈಪುಣ್ಯತೆ ಬೆಂಬಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಅರ್ಹ ವಿದ್ಯಾರ್ಥಿಗಳಿಗೆ ಶೇ.50ರಷ್ಟು ವಿದ್ಯಾರ್ಥಿವೇತನ ಪಡೆಯುವ ಅವಕಾಶಗಳ ಕುರಿತು ಸಹ ಮಾಹಿತಿ ನೀಡಲಾಗುತ್ತದೆ. ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಪ್ರಕ್ರಿಯೆ, ಅಗತ್ಯ ದಾಖಲೆಗಳು ಹಾಗೂ ವಿದ್ಯಾರ್ಥಿಗಳು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಜ್ಞರಿಂದ ನೇರ ಮಾರ್ಗದರ್ಶನ ದೊರೆಯಲಿದೆ.

ವಿವಿಧ ಕೋರ್ಸ್ಗಳಿಗೆ ಅವಕಾಶ

ಪದವಿ ಪೂರ್ವ, ಸ್ನಾತಕೋತ್ತರ, ಡಾಕ್ಟರೇಟ್, ಡಿಪ್ಲೊಮಾ, ವೃತ್ತಿಪರ ತರಬೇತಿ ಸೇರಿದಂತೆ ವಿವಿಧ ಕೋರ್ಸ್ಗಳಲ್ಲಿ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಮಹತ್ವದ ಅವಕಾಶವಾಗಲಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅರ್ಹತೆ ಹಾಗೂ ಆಸಕ್ತಿಗೆ ಅನುಗುಣವಾಗಿ ಸೂಕ್ತ ವಿಶ್ವವಿದ್ಯಾಲಯ ಮತ್ತು ಕೋರ್ಸ್ಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.

ಆನ್ಲೈನ್ ನೋಂದಣಿಗೆ ಅವಕಾಶ

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ವಿದ್ಯಾರ್ಥಿಗಳು ವೆಬ್ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮಕ್ಕೆ ಸಂಬಂಧಿಸಿದ ಕ್ಯೂಆರ್ ಕೋಡ್ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 106 ಅನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ 8618650935, 9481856181, 9481008754, 8722762768, 9686352815 ಹಾಗೂ 9008234012 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವ ಕನಸು ಹೊಂದಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande