
ಗದಗ, 02 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಡಿ ಸೆಪ್ಟೆಂಬರ್ 05 ರಂದು ಮನೆ ಬಾಗಿಲಿಗೆ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಡೆಯಲಿರುವ ಸಭೆಗಳನ್ನು ಪರಿಣಾಮಕಾರಿಯಾಗಿ ಆಯೋಜಿಸಿ, ಸಾರ್ವಜನಿಕರ ಕುಂದು ಕೊರತೆಗಳಿಗೆ ತ್ವರಿತ ಇತ್ಯರ್ಥಕ್ಕೆ ಹಾಗೂ ಗುಣಮಟ್ಟದ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸುವ ಕುರಿತು ಪೂರ್ವಭಾವಿ ಸಿದ್ಧತೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳನ್ನು ನಿಗದಿತ ಸಮಯಕ್ಕೆ ಅಚ್ಚುಕಟ್ಟಾಗಿ ಆಯೋಜಿಸಬೇಕು. ಸಭೆಗಳ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ವ್ಯವಸ್ಥೆಯನ್ನು ಮುಖ್ಯಮಂತ್ರಿಗಳ ಕಚೇರಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ನಿರ್ದೇಶಿಸಿದರು.
ಸೆಪ್ಟೆಂಬರ್ 5ರಿಂದ ಪ್ರಜಾಸೇವೆ 'ಅಭಿಯಾನ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಸೇವೆಗೆ ಇರಲಿ ನಿಮ್ಮ ಸಹಕಾರ ಪ್ರತಿ ಶನಿವಾರ ಬೆಳಿಗ್ಗೆ 10 ರಿಂದ ಸಂಜೆಯವರೆಗೆ ತಾಲೂಕು/ ಹೋಬಳಿ ಮಟ್ಟದಲ್ಲಿ ಅಭಿಯಾನದ ಸಭೆಗಳು ನಡೆಯಲಿವೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿ ತಿಂಗಳ 1ನೇ ಮತ್ತು 3ನೇ ಶನಿವಾರ, ಸ್ಥಳೀಯ ಶಾಸಕರ ನೇತೃತ್ವದಲ್ಲಿ 2ನೇ ಮತ್ತು 4ನೇ ಶನಿವಾರ ಪ್ರಜಾಸೇವಾ ಆಂದೋಲನ ಸಭೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಮನೆ-ಮನೆಗೆ ತೆರಳಿ ಅರ್ಜಿಗಳ ಕುರಿತು ಜಾಗೃತಿ ಮೂಡಿಸಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ಸಲ್ಲಿಸಲು ಅನುಕೂಲವಾಗುವಂತೆ ನಿಗದಿತ ಅರ್ಜಿ ನಮೂನೆಗಳನ್ನು ಮನೆ-ಮನೆಗೆ ತಲುಪಿಸಬೇಕು. ಸಭೆಗೆ ಆಗಮಿಸುವಾಗಲೇ ಅರ್ಜಿಗಳನ್ನು ಭರ್ತಿ ಮಾಡಿಕೊಂಡು ತರಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿಯೇ ಇತ್ಯರ್ಥಪಡಿಸಬಹುದಾದ ಅರ್ಜಿಗಳಿಗೆ ಯಾವುದೇ ವಿಳಂಬ ಮಾಡದೆ ತಕ್ಷಣ ಪರಿಹಾರ ಒದಗಿಸಬೇಕು. ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯಗಳ ಕುರಿತು ಮೇಲಾಧಿಕಾರಿಗಳ ಮಾರ್ಗದರ್ಶನದ ನೆಪ ಹೇಳದೆ, ಅಧಿಕಾರಿಗಳು ಸ್ವತಃ ಸೂಕ್ತ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
ಅರ್ಜಿ ಸಲ್ಲಿಕೆಗೆ ಅವಕಾಶ ಸಾರ್ವಜನಿಕರು ಗ್ರಾಮ ಒನ್ ಕೇಂದ್ರದಲ್ಲಿ ಅರ್ಜಿ, ಅಹವಾಲುಗಳನ್ನು ಸಲ್ಲಿಸಬಹುದು. ಪ್ರಜಾಸೇವೆ ಸಭೆ ನಡೆಯುವ ಸ್ಥಳದಲ್ಲೂ ಗ್ರಾಮ ಒನ್ ಮಳಿಗೆ ಸ್ಥಾಪಿಸಿ, ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ಒದಗಿಸಲಾಗುತ್ತದೆ. ಸ್ಥಳದಲ್ಲೇ ಆನ್ಲೈನ್ನಲ್ಲಿ ಅರ್ಜಿ ಹಾಗೂ ದೂರು ಸಲ್ಲಿಕೆಗೆ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡಲಾಗಿದೆ.
ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಸಹಾಯವಾಣಿ: 1902 ವೆಬ್ಸೈಟ್ ಗೆ ಸಂಪರ್ಕಿಸಿ ಸಾರ್ವಜನಿಕರು ಅರ್ಜಿ ಅಹವಾಲುಗಳನ್ನು ಸಲ್ಲಿಸಬಹುದು ಎಂದರು.
ಸಾರ್ವಜನಿಕರು ಯಾವ ಯಾವ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ಪಿಂಚಣಿ, ಪಹಣಿ, ವಸತಿ, ಹೊಸ ಪಡಿತರ ಚೀಟಿ, ಸಾರಿಗೆ, ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ದೇವಸ್ಥಾನ ಜೀರ್ಣೋದ್ಧಾರ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳ ಅಭಿವೃದ್ಧಿ, ವಿಬಿಜಿ ರಾಮ್ಜಿ, ಪೊಲೀಸ್ ಸೇವೆ, ಖಾಸಗಿ ಉದ್ಯೋಗ, ಕೆರೆ ತುಂಬಿಸುವ ಯೋಜನೆ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಇತರೆ ಸಮಸ್ಯೆಗಳ ಬಗ್ಗೆ ದೂರು ನೀಡಲು ಸಾರ್ವಜನಿಕರಿಗೆ ಅವಕಾಶ ನೀಡಿದೆ ಎಂದರು.
ಸ್ವೀಕೃತ ಅರ್ಜಿಗಳು ಪ್ರತಿ ಬುಧವಾರ ತಾಲೂಕು, ಉಪವಿಭಾಗ ಹಾಗೂ ಜಿಲ್ಲಾ ಮಟ್ಟದಲ್ಲಿ 3 ಹಂತಗಳ ಪರಿಶೀಲನೆ ನಡೆಯುತ್ತದೆ.
ಅರ್ಜಿ ವಿಲೇವಾರಿ ಕುರಿತು 15 ದಿನಕ್ಕೊಮ್ಮೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲೆಗೆ ಭೇಟಿ ನೀಡಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಸೂಚನೆ ನೀಡುವರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಶನಿವಾರದಂದು ಸ್ವೀಕರಿಸಲಾದ ಅರ್ಜಿಗಳನ್ನು ಪ್ರತಿ ಬುಧವಾರ ಹಂತವಾರು ಪರಿಶೀಲಿಸಿ ಇತ್ಯರ್ಥಪಡಿಸಲಾಗುವುದು. ಬೆಳಿಗ್ಗೆ 9ರಿಂದ 11ರವರೆಗೆ ತಾಲೂಕು ಮಟ್ಟದಲ್ಲಿ, 11 ರಿಂದ ಮಧ್ಯಾಹ್ನ 1ರವರೆಗೆ ಉಪವಿಭಾಗಾಧಿಕಾರಿ (ಎಸಿ) ಮಟ್ಟದಲ್ಲಿ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಅರ್ಜಿಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಅರ್ಜಿದಾರರಿಗೆ ಕೇವಲ ಉತ್ತರ ನೀಡುವುದಷ್ಟೇ ಅಲ್ಲದೆ, ಅವರ ಸಮಸ್ಯೆಗೆ ಸಂಪೂರ್ಣ ತೃಪ್ತಿಕರ ಹಾಗೂ ಗುಣಮಟ್ಟದ ಪರಿಹಾರ ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಇದಲ್ಲದೆ, ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಇಲಾಖೆಗಳ ಗುರಿಗಳ ಕುರಿತು ಮಾಹಿತಿ ದೊರೆಯುವಂತೆ ಪ್ರತಿಯೊಂದು ಇಲಾಖೆಯೂ ತಮ್ಮ ಯೋಜನೆಗಳ ವಿವರಗಳನ್ನು ಒಳಗೊಂಡ ಮಾಹಿತಿ ಪುಸ್ತಕ ಅಥವಾ ಮಾಹಿತಿ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಡಿ.ವೈ.ಎಸ್.ಪಿ ಮುರ್ತುಜಾ ಖಾದ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP