
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೂನ್‌ನಲ್ಲಿ ನಡೆದ ಯುಜಿಸಿ-ನೆಟ್ ಪರೀಕ್ಷೆಯ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಮರುಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳಿಗಾಗಿ ಮುಂಗಡ ನಗರ ಮಾಹಿತಿ ಚೀಟಿಯನ್ನು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಯುಜಿಸಿ-ನೆಟ್ ಅಧಿಕೃತ ಜಾಲತಾಣದಲ್ಲಿ ತಮ್ಮ ಪರೀಕ್ಷಾ ಕೇಂದ್ರದ ನಗರ ಮಾಹಿತಿಯನ್ನು ಪರಿಶೀಲಿಸಿ, ಮಾಹಿತಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಎನ್‌ಟಿಎ ಸೂಚಿಸಿದೆ. ಪ್ರವೇಶ ಪತ್ರ ಹಾಗೂ ಪರೀಕ್ಷಾ ಕೇಂದ್ರದ ವಿವರಗಳನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಇಂಗ್ಲಿಷ್ ಮತ್ತು ವಾಣಿಜ್ಯ ವಿಷಯಗಳ ಮರುಪರೀಕ್ಷೆ ಸೆ.9ರಂದು ನಡೆಯಲಿದ್ದು, ಇಂಗ್ಲಿಷ್ ಪರೀಕ್ಷೆ ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಹಾಗೂ ವಾಣಿಜ್ಯ ಪರೀಕ್ಷೆ ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ನಡೆಯಲಿದೆ. ಸಮಾಜಶಾಸ್ತ್ರ ಪರೀಕ್ಷೆ ಸೆ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ನಡೆಯಲಿದೆ.
ಜೂನ್ 22ರಿಂದ 30ರವರೆಗೆ 87 ವಿಷಯಗಳಲ್ಲಿ ಯುಜಿಸಿ-ನೆಟ್ ಪರೀಕ್ಷೆ ನಡೆದಿತ್ತು. ಈ ಮೂರು ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕ ಪಡೆಯುವುದಿಲ್ಲ ಎಂದು ಎನ್‌ಟಿಎ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.