
ರಾಯ್ಪುರ್, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ನಕ್ಸಲ್ ವಾದ, ಭಯ ಮತ್ತು ಕೊರತೆಯ ನೆರಳಿನಿಂದ ಹೊರಬಂದಿರುವ ಛತ್ತೀಸ್‌ಗಢ ಇದೀಗ ಶಾಂತಿ, ಪ್ರಗತಿ ಹಾಗೂ ಹೊಸ ಅವಕಾಶಗಳ ಯುಗಕ್ಕೆ ಪ್ರವೇಶಿಸಿದೆ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಹೇಳಿದರು.
ರಾಯಪುರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಮೂರನೇ ಘಟಿಕೋತ್ಸವದಲ್ಲಿ ಬುಧವಾರ ಮಾತನಾಡಿದ ಅವರು, ಹಿಂದೆ ಹಿಂಸಾಚಾರಕ್ಕೆ ಹೆಸರಾಗಿದ್ದ ಪ್ರದೇಶಗಳಿಗೆ ಇಂದು ರಸ್ತೆ, ಶಾಲೆ, ಆಸ್ಪತ್ರೆ, ಸಂಪರ್ಕ ವ್ಯವಸ್ಥೆ ಹಾಗೂ ಹೂಡಿಕೆಗಳು ತಲುಪುತ್ತಿವೆ ಎಂದರು.
ಏಮ್ಸ್ ರಾಯಪುರ ರಾಜ್ಯದ ಆರೋಗ್ಯ ಸೇವೆಯಲ್ಲಿನ ಐತಿಹಾಸಿಕ ಬದಲಾವಣೆಯ ಪ್ರಮುಖ ಸಂಕೇತವಾಗಿದೆ. ಉನ್ನತ ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆ ಹಾಗೂ ಅಂಗಾಂಗ ಕಸಿ ಕ್ಷೇತ್ರದಲ್ಲಿ ಸಂಸ್ಥೆ ಸಾಧಿಸಿರುವ ಪ್ರಗತಿ ಶ್ಲಾಘನೀಯ. ರಾಜ್ಯದ ಮೊದಲ ‘ಸ್ವ್ಯಾಪ್ ಕಿಡ್ನಿ ಕಸಿ’ ಹಾಗೂ ಹೃದಯ ಕಸಿ ಕಾರ್ಯಕ್ರಮಕ್ಕೆ ದೊರೆತ ಅನುಮತಿ ಪ್ರಮುಖ ಸಾಧನೆಗಳಾಗಿವೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ ವಿವಿಧ ವಿಭಾಗಗಳ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ವಿತರಿಸಿದರು. ಪದವಿ, ಸ್ನಾತಕೋತ್ತರ, ಸೂಪರ್ ಸ್ಪೆಷಾಲಿಟಿ, ಡಾಕ್ಟರೇಟ್ ಹಾಗೂ ಸಂಬಂಧಿತ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಒಟ್ಟು 689 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 376 ವಿದ್ಯಾರ್ಥಿನಿಯರು ಹಾಗೂ 313 ವಿದ್ಯಾರ್ಥಿಗಳು ಇದ್ದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಮಾದಕವಸ್ತುಗಳಿಂದ ದೂರವಿರುವಂತೆ ಹಾಗೂ ಸಮಾಜದಲ್ಲಿ ಅದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವಂತೆ ‘ಮಾದಕವಸ್ತುಗಳಿಗೆ ಇಲ್ಲ’ ಎಂಬ ಪ್ರತಿಜ್ಞೆ ಬೋಧಿಸಲಾಯಿತು.
ಘಟಿಕೋತ್ಸವವು ಕೇವಲ ಸಂಭ್ರಮದ ಕ್ಷಣವಲ್ಲ, ಜವಾಬ್ದಾರಿಯ ಅವಕಾಶವೂ ಆಗಿದೆ. ವಿದ್ಯಾರ್ಥಿಗಳು ಪಡೆದ ಪದವಿಯೊಂದಿಗೆ ಭಾರತದ ಜನರ ಆರೋಗ್ಯ, ವಿಶ್ವಾಸ ಮತ್ತು ಜೀವದ ಹೊಣೆಗಾರಿಕೆಯನ್ನೂ ಸ್ವೀಕರಿಸಬೇಕು ಎಂದು ಉಪರಾಷ್ಟ್ರಪತಿ ಹೇಳಿದರು.
ಛತ್ತೀಸ್‌ಗಢ ರಾಜ್ಯಪಾಲ ರಮೇನ್ ಡೇಕಾ, ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ರಾಜ್ಯ ಆರೋಗ್ಯ ಸಚಿವ ಶ್ಯಾಮ್ ಬಿಹಾರಿ ಜೈಸ್ವಾಲ್, ರಾಯಪುರ ಸಂಸದ ಬೃಜಮೋಹನ್ ಅಗರವಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.