
ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬೆಂಗಳೂರಿನ ಸಾರಿಗೆ ಜೀವನಾಡಿಯಾಗಿರುವ ಬಿಎಂಟಿಸಿಗೆ ತೈಲ ಕಂಪನಿಗಳಿಗೆ ಪಾವತಿಸಲು ಹಣವಿಲ್ಲದೆ ಡೀಸೆಲ್ ಪೂರೈಕೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಈ ಕುರಿತು ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ಪ್ರತಿದಿನ 40 ಲಕ್ಷಕ್ಕೂ ಅಧಿಕ ಪ್ರಯಾಣಿಕರನ್ನು ಸಾಗಿಸುವ ಬಿಎಂಟಿಸಿಗೆ ಸರ್ಕಾರದಿಂದ ಬರಬೇಕಾದ ₹1,000 ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ. ಅಲ್ಲದೆ, ₹600 ಕೋಟಿ ಡೀಸೆಲ್ ಬಿಲ್ ಬಾಕಿ ಉಳಿಸಿಕೊಂಡು ತೈಲ ಕಂಪನಿಗಳಿಂದ ಎಚ್ಚರಿಕೆ ಪಡೆಯುವ ಹಂತಕ್ಕೆ ಸಾರಿಗೆ ನಿಗಮವನ್ನು ತಂದು ನಿಲ್ಲಿಸಲಾಗಿದೆ ಎಂದು ದೂರಿದ್ದಾರೆ.
‘ಶಕ್ತಿ ಯೋಜನೆ’ ಹೆಸರಿನಲ್ಲಿ ಪ್ರಚಾರ ಪಡೆದಿರುವ ಸರ್ಕಾರವು ಸಾರಿಗೆ ನಿಗಮಗಳಿಗೆ ನೀಡಬೇಕಾದ ₹5,000 ಕೋಟಿ ಅನುದಾನವನ್ನು ಬಾಕಿ ಉಳಿಸಿಕೊಂಡಿದೆ ಎಂದು ಅಶೋಕ ಆರೋಪಿಸಿದ್ದಾರೆ. ಬಿಎಂಟಿಸಿಗೆ ಪ್ರತಿದಿನ ಸುಮಾರು 2.5 ಲಕ್ಷ ಲೀಟರ್ ಡೀಸೆಲ್ ಅಗತ್ಯವಿದ್ದು, ಹಣ ಪಾವತಿಸದ ಕಾರಣ ಬಸ್‌ಗಳು ಡಿಪೋಗಳಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿರುವುದು ಸರ್ಕಾರದ ಸಾಧನೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಸಾರಿಗೆ ಸಂಸ್ಥೆಗಳನ್ನು ಸಾಲದ ಸುಳಿಗೆ ಸಿಲುಕಿಸಿ, ದಿನನಿತ್ಯದ ನಿರ್ವಹಣೆಗೂ ಹಣವಿಲ್ಲದ ಸ್ಥಿತಿಗೆ ತಂದು ನಿಲ್ಲಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ. ಡೀಸೆಲ್ ಪೂರೈಕೆ ಸ್ಥಗಿತಗೊಂಡರೆ ಪ್ರತಿದಿನ ಪ್ರಯಾಣಿಸುವ 40 ಲಕ್ಷ ಬೆಂಗಳೂರಿಗರ ಪರಿಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿರುವ ಅವರು, ಬಿಡಿಭಾಗಗಳ ಕೊರತೆ ಮತ್ತು ಡೀಸೆಲ್ ಕೊರತೆಯ ನಡುವೆಯೇ ಸರ್ಕಾರದ ಗ್ಯಾರಂಟಿ ಆಡಳಿತ ಸಾಗುತ್ತಿದೆ ಎಂದು ಆರೋಪಿಸಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು’, ಸುರಂಗ ರಸ್ತೆ, ಸ್ಕೈಡೆಕ್ ಸೇರಿದಂತೆ ದೊಡ್ಡ ಯೋಜನೆಗಳ ಬಗ್ಗೆ ಮಾತನಾಡುವ ಬದಲು ಮೊದಲು ನಗರದ ಬಸ್‌ಗಳಿಗೆ ಡೀಸೆಲ್ ಹಾಕಿಸಲು ಹಣ ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಆಗ್ರಹಿಸಿದ್ದಾರೆ.
ಸಾರಿಗೆ ನಿಗಮಗಳಿಗೆ ಬರಬೇಕಾದ ₹5,000 ಕೋಟಿ ಶಕ್ತಿ ಯೋಜನೆಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ಸಾರಿಗೆ ಸಂಸ್ಥೆಗಳನ್ನು ಮುಳುಗಿಸುತ್ತಿರುವ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯದಲ್ಲಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಅಶೋಕ ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.