ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದ್ದೇವೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಿರುವುದನ್ನು ಬಿಜೆಪಿ ಟೀಕಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಮಂಗಳೂರು
ಪ್ರಿಯಾಂಕ್ ಖರ್ಗೆ ಸಂಗ್ರಹ ಚಿತ್ರ


ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಿರುವುದನ್ನು ಬಿಜೆಪಿ ಟೀಕಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಮಂಗಳೂರು ಸಚಿವ ಸಂಪುಟ ಸಭೆಯನ್ನು ‘ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್’ ಎಂದು ಬಿಜೆಪಿ ಟೀಕಿಸಿರುವುದು ಹತಾಶೆಯ ಪ್ರತೀಕ. ಕರಾವಳಿಗರ ಅಭಿವೃದ್ಧಿಪರ ನಿಲುವುಗಳನ್ನು ಕಂಡು ಬಿಜೆಪಿಗೆ ತಳಮಳ ಶುರುವಾಗಿದೆ ಎಂದು ಅವರು ಎಕ್ಸ್‌ನಲ್ಲಿ ಹೇಳಿದ್ದಾರೆ.

ಬಿಜೆಪಿ ಕರಾವಳಿಯನ್ನು ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿತ್ತು. ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯಾಗಿ ಪರಿವರ್ತಿಸುತ್ತಿದೆ. ಬಿಜೆಪಿ ಕರಾವಳಿಯನ್ನು ಕೇವಲ ಮತಬ್ಯಾಂಕ್ ಪ್ರದೇಶವಾಗಿ ನೋಡಿದರೆ, ಕಾಂಗ್ರೆಸ್ ಸರ್ಕಾರ ಕರಾವಳಿಯಲ್ಲಿ ಪ್ರಗತಿಯ ಸಾಧ್ಯತೆಗಳನ್ನು ಕಾಣುತ್ತಿದೆ ಎಂದು ತಿಳಿಸಿದ್ದಾರೆ.

ಬಿಜೆಪಿಗರು ಕರಾವಳಿಗೆ ಬರುತ್ತಿದ್ದದ್ದು ‘ಹೊಡಿ, ಬಡಿ’ ಎಂಬ ಪ್ರಚೋದನೆಯ ಭಾಷಣ ಮಾಡಲು ಮಾತ್ರ. ಆದರೆ ಕಾಂಗ್ರೆಸ್ ಸರ್ಕಾರ ಕರಾವಳಿಗರ ಆತ್ಮಗೌರವವನ್ನು ಗೌರವಿಸಲು ಕಾಲಿಟ್ಟಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬಿಜೆಪಿ ಕರಾವಳಿಯಲ್ಲಿ ಕೋಮು ಕಲಹದ ಚರ್ಚೆಗಳನ್ನು ಹುಟ್ಟುಹಾಕುತ್ತಿತ್ತು. ನಾವು ದತ್ತಾಂಶ ಕೇಂದ್ರ, ಜಲಮೆಟ್ರೋ, ಪ್ರವಾಸೋದ್ಯಮ, ಸಮುದ್ರ ಜೀವತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನಗಳಂತಹ ಪ್ರಗತಿಪರ ವಿಷಯಗಳ ಚರ್ಚೆ ಹುಟ್ಟುಹಾಕಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡದ ಜನರ ಬೇಡಿಕೆಗಳನ್ನು ಕೇಳಿಸಿಕೊಳ್ಳುವ ಕೆಲಸವನ್ನು ಬಿಜೆಪಿಗರು ಮಾಡಿರಲಿಲ್ಲ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸಿರುವುದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದ್ದಾರೆ.

ಕೋಮು ಪ್ರಚೋದನೆ ಮತ್ತು ರಕ್ತ-ಕಣ್ಣೀರು ಇವೆರಡನ್ನೂ ಹೊರತುಪಡಿಸಿದರೆ ಕರಾವಳಿಗೆ ಬಿಜೆಪಿ ನೀಡಿದ ಕೊಡುಗೆ ಶೂನ್ಯ. ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಗಳ ಘೋಷಣೆ ಐತಿಹಾಸಿಕವಾಗಿದ್ದು, ಕರಾವಳಿಯನ್ನು ಮತಬ್ಯಾಂಕ್ ಮಾಡಿಕೊಂಡಿದ್ದ ಬಿಜೆಪಿಗೆ ಇಂತಹ ಅಭಿವೃದ್ಧಿಪರ ನಿಲುವು ತಳೆಯಲು ಸಾಧ್ಯವಾಗಲಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಜನರು ಕೋಮು ವಿಷಯಗಳನ್ನು ಬಿಟ್ಟು ಪ್ರಗತಿಯ ವಿಷಯಗಳತ್ತ ಚಿಂತನೆ ಆರಂಭಿಸಿರುವುದೇ ಬಿಜೆಪಿಗೆ ಅಸ್ತಿತ್ವದ ಭಯ ಕಾಡಲು ಕಾರಣವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande