
ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಅತಿವೇಗವಾಗಿ ಚಲಿಸುತ್ತಿದ್ದ ರಾಯಲ್ ಎನ್ಫೀಲ್ಡ್ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗೆ ಡಿಕ್ಕಿ ಹೊಡೆದು, ಬಳಿಕ ಕಾಂಪೌಂಡ್ ಗೋಡೆಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಬಿಇ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಮೃತರನ್ನು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ವಚನ್ (20) ಮತ್ತು ಕ್ರಿಶಾಂತ್ (20) ಎಂದು ಗುರುತಿಸಲಾಗಿದೆ. ವಚನ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹಾಗೂ ಕ್ರಿಶಾಂತ್ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಸ್ನೇಹಿತರಾಗಿದ್ದು, ದಿಬ್ಬೂರಹಳ್ಳಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದರು.
ಶುಕ್ರವಾರ ರಾತ್ರಿ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಹೊರಗೆ ತೆರಳಿದ್ದ ಅವರು, ರಾಜಾನುಕುಂಟೆ ಕಡೆಯಿಂದ ತಮ್ಮ ಕೊಠಡಿಗೆ ಹಿಂದಿರುಗುತ್ತಿದ್ದ ವೇಳೆ ಬೆಳಗಿನ ಜಾವ ಸುಮಾರು 4 ಗಂಟೆಗೆ ಕಾಕೋಳು ರಸ್ತೆಯ ಇಟ್ಕಲ್ಪುರ ಗೇಟ್ ಸಮೀಪ ಅಪಘಾತ ಸಂಭವಿಸಿದೆ.
ಅತಿವೇಗದಿಂದಾಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಗೆ ಡಿಕ್ಕಿ ಹೊಡೆದು, ನಂತರ ಕಾಂಪೌಂಡ್ ಗೋಡೆಗೆ ಅಪ್ಪಳಿಸಿದೆ ಎನ್ನಲಾಗಿದೆ.
ಅಪಘಾತದಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R