ರಷ್ಯಾ–ಇರಾನ್ ನಿರ್ಬಂಧ ಮಸೂದೆಗೆ ಟ್ರಂಪ್ ಸಹಿ; ಶೇ.100ರವರೆಗೆ ಸುಂಕ ವಿಧಿಸುವ ಅಧಿಕಾರ
ವಾಷಿಂಗ್ಟನ್, 19 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ರಷ್ಯಾ ಮತ್ತು ಇರಾನ್ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ‘ಲಿಂಡ್ಸೆ ಒ. ಗ್ರಾಹಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆಕ್ಟ್ ಆಫ್ 2026’ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದು, ಅದು ಕಾನೂನಾಗಿ ಜಾರಿಗ
डोनाल्ड ट्रंप (फाइल फोटो)


ವಾಷಿಂಗ್ಟನ್, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ರಷ್ಯಾ ಮತ್ತು ಇರಾನ್ ವಿರುದ್ಧದ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸುವ ‘ಲಿಂಡ್ಸೆ ಒ. ಗ್ರಾಹಂ ಸ್ಯಾಂಕ್ಷನಿಂಗ್ ರಷ್ಯಾ ಆ್ಯಂಡ್ ಇರಾನ್ ಆಕ್ಟ್ ಆಫ್ 2026’ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದು, ಅದು ಕಾನೂನಾಗಿ ಜಾರಿಗೆ ಬಂದಿದೆ.

ಹೊಸ ಕಾನೂನಿನಡಿ ರಷ್ಯಾದಿಂದ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಆಮದು ಸುಂಕ ವಿಧಿಸುವ ವ್ಯಾಪಕ ಅಧಿಕಾರವನ್ನು ಅಮೆರಿಕ ಅಧ್ಯಕ್ಷರಿಗೆ ನೀಡಲಾಗಿದೆ. ಇದರ ವ್ಯಾಪ್ತಿಗೆ ಪ್ರಮುಖವಾಗಿ ಭಾರತ ಮತ್ತು ಚೀನಾ ಬರುವ ಸಾಧ್ಯತೆಯಿದೆ.

‘ದಿ ಗಾರ್ಡಿಯನ್’ ವರದಿ ಪ್ರಕಾರ, ಅಮೆರಿಕದ ಪ್ರತಿನಿಧಿಗಳ ಸಭೆ ಈ ವಾರ ಮಸೂದೆಯನ್ನು 262-159 ಮತಗಳಿಂದ ಅಂಗೀಕರಿಸಿತ್ತು. ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಸೆನೆಟ್‌ನಲ್ಲಿ ಮಸೂದೆ 86-11 ಮತಗಳ ಭಾರೀ ಬಹುಮತದಿಂದ ಅಂಗೀಕಾರಗೊಂಡಿತ್ತು.

ರಷ್ಯಾದ ಆರ್ಥಿಕ ಸಾಮರ್ಥ್ಯವನ್ನು ದುರ್ಬಲಗೊಳಿಸುವುದು ಹಾಗೂ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಅದರ ಸಂಪನ್ಮೂಲಗಳ ಮೇಲೆ ಒತ್ತಡ ಹೆಚ್ಚಿಸುವುದು ಕಾನೂನಿನ ಉದ್ದೇಶ ಎಂದು ಅಮೆರಿಕ ಆಡಳಿತ ತಿಳಿಸಿದೆ. ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ದೇಶಗಳ ಮೇಲೆ ಶೇ.100ರವರೆಗೆ ಸುಂಕ ವಿಧಿಸಲು ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ನಿರ್ದಿಷ್ಟ ಸಂದರ್ಭಗಳಲ್ಲಿ ವಿನಾಯಿತಿ ನೀಡುವ ಅಧಿಕಾರವನ್ನೂ ಅಧ್ಯಕ್ಷರಿಗೆ ಕಾನೂನು ನೀಡಿದೆ. ಅಂತಹ ವಿನಾಯಿತಿ ರಾಷ್ಟ್ರೀಯ ಹಿತಾಸಕ್ತಿಯಲ್ಲಿದೆ ಎಂಬುದನ್ನು ಕಾಂಗ್ರೆಸ್‌ಗೆ ಪ್ರಮಾಣೀಕರಿಸುವ ಅಗತ್ಯವಿದೆ.

ಇದೇ ವೇಳೆ, ಇರಾನ್‌ನ ಇಂಧನ ಮತ್ತು ಶಸ್ತ್ರಾಸ್ತ್ರ ಕ್ಷೇತ್ರಗಳ ಮೇಲಿನ ನಿರ್ಬಂಧಗಳನ್ನು ಮುಂದಿನ ಐದು ವರ್ಷಗಳವರೆಗೆ ವಿಸ್ತರಿಸಲಾಗಿದೆ. ರಷ್ಯಾದ ಸರ್ಕಾರಿ ಅಧಿಕಾರಿಗಳು, ಹಣಕಾಸು ಸಂಸ್ಥೆಗಳು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಜಾಲಗಳು ಹಾಗೂ ಇಂಧನ ಸಾಗಣೆಯಲ್ಲಿ ಬಳಸುವ ಹಡಗುಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯಾಪ್ತಿಯನ್ನೂ ವಿಸ್ತರಿಸಲಾಗಿದೆ.

ಅಮೆರಿಕದ ಈ ಕ್ರಮವು ಭಾರತ ಮತ್ತು ಚೀನಾ ಸೇರಿದಂತೆ ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಭಾರತವು ತನ್ನ ಇಂಧನ ಅಗತ್ಯಗಳಿಗೆ ಅನುಗುಣವಾಗಿ ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡುವುದಾಗಿ ಸ್ಪಷ್ಟಪಡಿಸಿತ್ತು. ಹೊರಗಿನ ಒತ್ತಡಕ್ಕೆ ಒಳಗಾಗದೆ, ಸೂಕ್ತ ಬೆಲೆಯಲ್ಲಿ ದೊರೆಯುವ ದೇಶಗಳಿಂದ ತೈಲ ಮತ್ತು ಇತರ ಇಂಧನ ಸಂಪನ್ಮೂಲಗಳನ್ನು ಖರೀದಿಸುವುದನ್ನು ಮುಂದುವರಿಸುವ ನಿಲುವನ್ನು ಭಾರತ ವ್ಯಕ್ತಪಡಿಸಿದೆ.

ರಷ್ಯಾ–ಉಕ್ರೇನ್ ಯುದ್ಧದ ಬಳಿಕ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ವಿಧಿಸಿರುವ ನಿರ್ಬಂಧಗಳ ಹಿನ್ನೆಲೆಯಲ್ಲಿ, ಅಭಿವೃದ್ಧಿಶೀಲ ದೇಶವಾಗಿರುವ ಭಾರತಕ್ಕೆ ತನ್ನ ಜನಸಂಖ್ಯೆಗೆ ಕೈಗೆಟಕುವ ದರದಲ್ಲಿ ನಿರಂತರ ಇಂಧನ ಪೂರೈಕೆ ಖಚಿತಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿದೆ ಎಂಬ ನಿಲುವನ್ನು ಭಾರತ ಹೊಂದಿದೆ.

ಇತ್ತ, ಪ್ರತಿನಿಧಿಗಳ ಸಭೆಯಲ್ಲಿ ಮಸೂದೆ ಅಂಗೀಕಾರಗೊಂಡ ಬಳಿಕ ಚೀನಾ ಏಕಪಕ್ಷೀಯ ನಿರ್ಬಂಧಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಕಾನೂನಿನ ಆಧಾರವಿಲ್ಲದ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬೆಂಬಲವಿಲ್ಲದ ನಿರ್ಬಂಧಗಳನ್ನು ವಿರೋಧಿಸುವುದಾಗಿ ಚೀನಾ ತಿಳಿಸಿದೆ. ಯಾವುದೇ ದೇಶದೊಂದಿಗೆ ತನ್ನ ಸಾಮಾನ್ಯ ವ್ಯಾಪಾರ ಮತ್ತು ಆರ್ಥಿಕ ಸಹಕಾರದಲ್ಲಿ ಮೂರನೇ ದೇಶದ ಹಸ್ತಕ್ಷೇಪ ಅಥವಾ ಒತ್ತಡ ಇರಬಾರದು ಎಂದು ಚೀನಾ ಹೇಳಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande