ಮಂಗಳೂರು ಬಂದರಿಗೆ ಮುಖ್ಯಮಂತ್ರಿ ದಿಢೀರ್ ಭೇಟಿ; ಅಕ್ರಮ, ಕಾನೂನು ಉಲ್ಲಂಘನೆ ವಿರುದ್ಧ ಕ್ರಮದ ಎಚ್ಚರಿಕೆ
ಮಂಗಳೂರು, 19 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಬಂದರು ಪ್ರದೇಶದಲ್ಲಿ ಬೋಟ್‌ನಲ್ಲಿ ಸಂಚರಿ
ಮಂಗಳೂರು ಬಂದರಿಗೆ ಮುಖ್ಯಮಂತ್ರಿ ದಿಢೀರ್ ಭೇಟಿ


ಮಂಗಳೂರು, 19 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಳಗ್ಗೆ ಮಂಗಳೂರು ಬಂದರಿಗೆ ದಿಢೀರ್ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಬಂದರು ಪ್ರದೇಶದಲ್ಲಿ ಬೋಟ್‌ನಲ್ಲಿ ಸಂಚರಿಸಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳು ಹಾಗೂ ಮೀನುಗಾರರ ಮುಖಂಡರಿಂದ ಮಾಹಿತಿ ಪಡೆದರು.

ಬೆಳಗ್ಗೆ 6 ಗಂಟೆಗೆ ಬಂದರಿಗೆ ಆಗಮಿಸಿದ ಮುಖ್ಯಮಂತ್ರಿ, ಬಂದರಿನಲ್ಲಿ ಈಗಿರುವ ವ್ಯವಸ್ಥೆ, ಬೋಟ್‌ಗಳ ನಿಲುಗಡೆ, ಹೂಳೆತ್ತುವಿಕೆ ಸೇರಿದಂತೆ ಮುಂದಿನ ಅಭಿವೃದ್ಧಿ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.

ಮೀನುಗಾರರ ಸಂಘದ ಮಾಜಿ ಅಧ್ಯಕ್ಷರಾದ ಚೇತನ್ ಬೆಂಗ್ರೆ ಹಾಗೂ ಮೋಹನ್ ಬೆಂಗ್ರೆ ಅವರು, ಸದ್ಯ ಸುಮಾರು 200 ಬೋಟ್‌ಗಳಿಗೆ ಡಾಕ್ ವ್ಯವಸ್ಥೆಯಿದ್ದು, ಫಲ್ಗುಣಿ, ನೇತ್ರಾವತಿ ನದಿ ಹಾಗೂ ಅರಬ್ಬಿ ಸಮುದ್ರ ಸೇರುವ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಹೊಸ ಡಾಕ್‌ಗಳನ್ನು ನಿರ್ಮಿಸಿದರೆ ಹೆಚ್ಚಿನ ಬೋಟ್‌ಗಳಿಗೆ ನಿಲುಗಡೆ ವ್ಯವಸ್ಥೆ ಕಲ್ಪಿಸಬಹುದು ಎಂದು ತಿಳಿಸಿದರು. ಇದಕ್ಕಾಗಿ ಹೂಳೆತ್ತುವಿಕೆ ಅಗತ್ಯವಿದ್ದು, ಕಳೆದ 25 ವರ್ಷಗಳಿಂದ ಹೂಳೆತ್ತುವಿಕೆ ನಡೆದಿಲ್ಲ. ಎರಡು ನದಿಗಳು ಹಾಗೂ ಅಳಿವೆ ಬಾಗಿಲು ಪ್ರದೇಶದಲ್ಲಿ ಹೂಳೆತ್ತಬೇಕಿದೆ ಎಂದು ವಿವರಿಸಿದರು.

ಬಂದರಿನ ತಟ ಪ್ರದೇಶದಲ್ಲಿ ಮರಳು ತುಂಬಿಕೊಂಡಿದ್ದು, ಅದನ್ನು ತೆರವುಗೊಳಿಸಬೇಕು. ಆಳವಾದ ಪ್ರದೇಶಗಳನ್ನು ಗುರುತಿಸಿ ಮಾರ್ಗ ಸೂಚಕಗಳನ್ನು ಅಳವಡಿಸಿದರೆ ಬೋಟ್‌ಗಳ ಸಂಚಾರ ಸುಗಮವಾಗಲಿದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು. ಬಳಿಕ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.

ವ್ಯಾಪಾರ ಸ್ಥಗಿತಕ್ಕೆ ಸಿಎಂ ಸಿಡಿಮಿಡಿ

ತಮ್ಮ ಭೇಟಿ ಹಿನ್ನೆಲೆಯಲ್ಲಿ ಬಂದರಿನಲ್ಲಿ ಮೀನುಗಾರರು ವ್ಯಾಪಾರ ನಡೆಸಲು ಅವಕಾಶ ನೀಡದಿರುವುದನ್ನು ಗಮನಿಸಿದ ಮುಖ್ಯಮಂತ್ರಿ ಸಿಡಿಮಿಡಿಗೊಂಡರು. ಯಾವುದೇ ಕಾರಣಕ್ಕೂ ವ್ಯಾಪಾರ ಸ್ಥಗಿತಗೊಳಿಸಬಾರದು. ಇದರಿಂದ ಮೀನುಗಾರರು ಹಾಗೂ ವ್ಯಾಪಾರಿಗಳ ಜೀವನಕ್ಕೆ ತೊಂದರೆಯಾಗುತ್ತದೆ. ಕೂಡಲೇ ವ್ಯಾಪಾರ ಆರಂಭಿಸುವಂತೆ ಸೂಚಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಬಂದಾಗ ಮಂಗಳೂರು ಬಂದರಿನ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದಕ್ಕೆ ಕಾರಣವೇನು ಎಂಬ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಆಯುಕ್ತರಿಗೆ ನಿರ್ದೇಶನ ನೀಡಿದ್ದೇನೆ. ಅಧಿಕಾರಿಗಳೇ ಇದಕ್ಕೆ ಕಾರಣರಾಗಿದ್ದರೆ ಅಮಾನತು ಮಾಡಲಾಗುವುದು. ಅಕ್ರಮಗಳನ್ನು ಮುಚ್ಚಿಡುವ ಉದ್ದೇಶದಿಂದ ಈ ಕೆಲಸ ಮಾಡಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮೀನುಗಾರರು, ವರ್ತಕರು ಹಾಗೂ ಬೋಟ್‌ಗಳನ್ನು ನಂಬಿಕೊಂಡಿರುವ ಮೀನುಗಾರ ಸಮುದಾಯದ ವಾಸ್ತವ ಸ್ಥಿತಿಗತಿಯನ್ನು ಅರಿಯಲು ತಾವು ಬಂದಿದ್ದು, ಯಾವುದೇ ವಿಶೇಷ ಭದ್ರತೆಯ ಅಗತ್ಯವಿಲ್ಲ ಎಂದರು.

ಅಕ್ರಮ ನಿರ್ಮಾಣದ ವಿರುದ್ಧ ಕ್ರಮ

ದೇಶದ ವಿವಿಧ ಭಾಗಗಳಿಂದ ಜನರು ಮಂಗಳೂರಿಗೆ ಬಂದು ವ್ಯಾಪಾರ ವಹಿವಾಟು ನಡೆಸುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗಬಾರದು. ಅಗತ್ಯ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ವಾಹನ ಸಂಚಾರವೂ ಸುಗಮವಾಗಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ರಸ್ತೆ ನಿರ್ಬಂಧಿಸಿರುವುದು ಹಾಗೂ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವುದು ತಮ್ಮ ಗಮನಕ್ಕೆ ಬಂದಿದೆ. ಕಾನೂನು ಉಲ್ಲಂಘಿಸಿರುವವರು ಎಷ್ಟೇ ದೊಡ್ಡವರಾಗಿದ್ದರೂ ಅಥವಾ ಪ್ರಭಾವಶಾಲಿಗಳಾಗಿದ್ದರೂ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ತಿಯಾಗಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರದ ವಶಕ್ಕೆ ಪಡೆದು ಅಭಿವೃದ್ಧಿಪಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಣ್ಣ ಮೀನುಗಾರರು ಬೋಟ್‌ಗಳನ್ನು ನಿಲ್ಲಿಸುವ ವಿಚಾರದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಮೀನುಗಾರ ಸಮುದಾಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ

ಮೀನುಗಾರರು ದೊಡ್ಡ ಸಮುದಾಯವಾಗಿದ್ದು, ಎಲ್ಲ ವರ್ಗದ ಜನರು ಸೌಹಾರ್ದತೆಯಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಆರ್ಥಿಕ ಶಕ್ತಿ ಕೇಂದ್ರವಾಗಿದ್ದು, ಸಮುದಾಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಮೀನುಗಾರರಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಈಗಿರುವ 40–50 ಸೀಟುಗಳನ್ನು 200ಕ್ಕೆ ಹೆಚ್ಚಿಸಲಾಗುವುದು. ವಿದ್ಯಾಭ್ಯಾಸ, ಸಮುದ್ರ ಮೆಟ್ರೋ ಹಾಗೂ ನೀಲಿ ಆರ್ಥಿಕತೆಗೆ ಒತ್ತು ನೀಡಲು ಸರ್ಕಾರ ತೀರ್ಮಾನಿಸಿದೆ ಎಂದರು.

ಮೂಲಸೌಕರ್ಯಕ್ಕೆ ₹16 ಸಾವಿರ ಕೋಟಿ

ಅಭಿವೃದ್ಧಿಗಾಗಿ ಈಗಾಗಲೇ ₹32 ಸಾವಿರ ಕೋಟಿ ಮೊತ್ತವನ್ನು ಘೋಷಿಸಲಾಗಿದೆ. ಇದರಲ್ಲಿ ಗ್ರಾಮೀಣ ಭಾಗದ ರಸ್ತೆ, ನೀರು ಸೇರಿದಂತೆ ಮೂಲಸೌಕರ್ಯಕ್ಕೆ ₹16 ಸಾವಿರ ಕೋಟಿ ನೀಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಮಂಗಳೂರು ಮತ್ತು ಕಾರವಾರದಲ್ಲಿ ಎಲ್ಲೆಲ್ಲಿ ವ್ಯಾಪಾರ ವಹಿವಾಟು ನಡೆಯುತ್ತದೆ ಎಂಬುದರ ಕುರಿತು ಸಮಗ್ರ ವರದಿ ಪಡೆದು, ಸಮುದ್ರದಂಚಿನ ಮೀನುಗಾರ ಕುಟುಂಬಗಳಿಗೆ ಅಗತ್ಯ ತಾಂತ್ರಿಕ ನೆರವು ಒದಗಿಸಲು ಯೋಜನೆ ರೂಪಿಸಲಾಗುವುದು. ಮೀನುಗಾರರು ನೇರವಾಗಿ ಹಂಚಿಕೊಳ್ಳಲು ಸಾಧ್ಯವಾಗದ ಸಮಸ್ಯೆಗಳಿದ್ದರೆ ಗುಪ್ತ ವರದಿ ಪಡೆದು ಪರಿಶೀಲಿಸಲಾಗುವುದು. ಮಾಫಿಯಾ ಚಟುವಟಿಕೆಗಳಿವೆಯೇ ಅಥವಾ ಯಾರಿಗಾದರೂ ತೊಂದರೆ ನೀಡಲಾಗುತ್ತಿದೆಯೇ ಎಂಬುದನ್ನೂ ಗಮನಿಸಲಾಗುವುದು. ನ್ಯಾಯಬದ್ಧವಾಗಿ ವ್ಯಾಪಾರ ವಹಿವಾಟು ನಡೆಯಬೇಕು ಮತ್ತು ಮೀನುಗಾರರ ಸಮುದಾಯ ಅಭಿವೃದ್ಧಿಯಾಗಬೇಕು ಎಂಬುದು ಸರ್ಕಾರದ ಗುರಿ ಎಂದರು.

ಅಳಿವೆ ಬಾಗಿಲಿನ ಹೂಳೆತ್ತುವಿಕೆ

ಅಳಿವೆ ಬಾಗಿಲಿನಲ್ಲಿ 35 ವರ್ಷಗಳಿಂದ ಹೂಳೆತ್ತದ ಕಾರಣ ಅಪಾಯಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ವಿಚಾರ ತಮ್ಮ ಗಮನಕ್ಕೆ ಬಂದಿದೆ ಎಂದರು.

ಹೂಳನ್ನು ಸಮುದ್ರಕ್ಕೆ ಬಿಡಬೇಕೆಂದು ಕೆಲವರು ಸಲಹೆ ನೀಡಿದ್ದಾರೆ. ಮತ್ತಷ್ಟು ಪ್ರದೇಶವನ್ನು ವಿಸ್ತರಿಸಬೇಕು ಎಂದು ಇನ್ನು ಕೆಲವರು ಹೇಳಿದ್ದಾರೆ. ಕೇಂದ್ರದ ತಾಂತ್ರಿಕ ಸಮಿತಿ ಈ ಬಗ್ಗೆ ಸಲಹೆ ನೀಡಬೇಕಿದೆ. ಸೂಕ್ತ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೂಳೆತ್ತುವಿಕೆ ಪ್ರಕ್ರಿಯೆಗೆ ಗುತ್ತಿಗೆ ಪಡೆಯಬೇಕೆ ಅಥವಾ ಯಂತ್ರಗಳು ಹಾಗೂ ಬೋಟ್‌ಗಳನ್ನು ಖರೀದಿಸಿ ಸರ್ಕಾರವೇ ಹೂಳೆತ್ತಬೇಕೆ ಎಂಬುದನ್ನು ತೀರ್ಮಾನಿಸಲಾಗುವುದು. ಹಿಂದೆ ಸರ್ಕಾರದಿಂದಲೇ ಹೂಳೆತ್ತುವ ವ್ಯವಸ್ಥೆ ಇತ್ತು, ಈಗ ಅದು ಇಲ್ಲ ಎಂದು ಹೇಳಿದರು.

ಕರಾವಳಿ ರಾಜ್ಯದ ಮಾತ್ರವಲ್ಲ, ದೇಶದ ಸಂಪತ್ತು

ಕರಾವಳಿ ಪ್ರದೇಶ ರಾಜ್ಯದ ಸಂಪತ್ತು ಮಾತ್ರವಲ್ಲ, ರಾಷ್ಟ್ರದ ಸಂಪತ್ತೂ ಆಗಿದೆ. ಅದನ್ನು ಸಂರಕ್ಷಿಸಬೇಕು. ಮಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಚಿಂತನೆ ನಡೆಸುತ್ತಿದೆ. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಕರಾವಳಿಯಲ್ಲಿ ಹೂಡಿಕೆದಾರರಿಗೆ ಪ್ರೋತ್ಸಾಹ ನೀಡಬೇಕು. ಹೊಸದಾಗಿ ಹೂಡಿಕೆ ಮಾಡುವವರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಹೂಡಿಕೆದಾರರು ಬಂದಾಗ ಉಳಿದುಕೊಳ್ಳಲು ಉತ್ತಮ ಹೋಟೆಲ್‌ಗಳ ನಿರ್ಮಾಣಕ್ಕೂ ಅವಕಾಶ ಕಲ್ಪಿಸಲಾಗುವುದು. ಲಭ್ಯವಿರುವ ಜಾಗಗಳನ್ನು ಗುರುತಿಸಿ ಕಾನೂನು ಚೌಕಟ್ಟಿನಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು ಎಂದರು.

‘ಅಶೋಕ್ ಅವರಿಗೆ ಮೀನು ಕಳುಹಿಸಿ ಆಸೆ ತೀರಿಸೋಣ’

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಮೀನು ತಿನ್ನುವ ಆಸೆಯಾಗಿದ್ದು, ಅವರಿಗೆ ಮೀನು ಬೇಕಂತೆ. ಮಂಗಳೂರಿನಿಂದಲೇ ಮೀನು ಕಳುಹಿಸಿ ಅವರ ಆಸೆ ತೀರಿಸೋಣ ಎಂದು ಶಿವಕುಮಾರ್ ವ್ಯಂಗ್ಯವಾಡಿದರು.

ಕರಾವಳಿ ಅಭಿವೃದ್ಧಿಯ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ವಿರೋಧ ಪಕ್ಷಗಳು ಸರ್ಕಾರದ ಅಭಿವೃದ್ಧಿ ಪ್ರವಾಸದ ಬಗ್ಗೆ ಕುಹಕದ ಮಾತುಗಳನ್ನು ಆಡುತ್ತಿವೆ. ಮುಖ್ಯಮಂತ್ರಿಗಳು ಮೀನು ತಿನ್ನಲು ಮಂಗಳೂರಿಗೆ ಹೋಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ತಾವು ಮೀನು ತಿನ್ನುವುದನ್ನು ಬಿಟ್ಟು ಬಹಳ ವರ್ಷಗಳಾಗಿವೆ. ವಿರೋಧ ಪಕ್ಷಗಳಿಗೆ ಅಭಿವೃದ್ಧಿ ಬೇಕಿಲ್ಲ ಎಂದು ಅವರು ಟೀಕಿಸಿದರು.

ತುಳು ಭಾಷೆ ಜನರ ಹೆಮ್ಮೆ

ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿರುವ ಕುರಿತು ಮಾತನಾಡಿದ ಮುಖ್ಯಮಂತ್ರಿ, ತುಳು ಭಾಷೆ ಕರಾವಳಿ ಭಾಗದ ಜನರ ಹೆಮ್ಮೆಯಾಗಿದೆ. ಇದು ಈ ಭಾಗದ ಜನರ ಬಹುದಿನಗಳ ನಿರೀಕ್ಷೆಯಾಗಿತ್ತು. ಎಲ್ಲ ಪಕ್ಷಗಳ ನಾಯಕರು ಇದನ್ನು ಬಯಸಿದ್ದರು. ಹೀಗಾಗಿ ಮಂಗಳೂರಿನಲ್ಲಿ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕಸ್ತೂರಿ ರಂಗನ್ ವಿಚಾರದಲ್ಲಿ ಜನಾಭಿಪ್ರಾಯ ಸಂಗ್ರಹ

ಕಸ್ತೂರಿ ರಂಗನ್ ವರದಿ ವಿಚಾರವಾಗಿ ತೀರ್ಥಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರ ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಅದಕ್ಕೂ ಮುನ್ನ ಈ ಭಾಗದ ಜನರ ಅಭಿಪ್ರಾಯ ಸಂಗ್ರಹಿಸಲು ಭೇಟಿ ನೀಡುತ್ತಿರುವುದಾಗಿ ಹೇಳಿದರು.

ಜನರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕೇಂದ್ರದ ಅಧಿಸೂಚನೆ ವಿರುದ್ಧ ಕಠಿಣ ನಿಲುವು ತಾಳಬೇಕೇ ಎಂಬುದನ್ನು ತೀರ್ಮಾನಿಸಲಾಗುವುದು. ಜನರ ಬದುಕು ಮುಖ್ಯವಾಗಿದ್ದು, ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದಿರುವಾಗ ಸಚಿವ ಸಂಪುಟದ ಯೋಜನೆಗಳಿಗೆ ಹಣ ಹೇಗೆ ಹೊಂದಿಸಲಾಗುವುದು ಎಂಬ ಪ್ರಶ್ನೆಗೆ, “ನಾವು ನುಡಿದಂತೆ ನಡೆಯುತ್ತೇವೆ. ಅದೇ ನಮ್ಮ ಶಕ್ತಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande