ಪಟಾಕಿ ಕೊಡಿಸುವ ನೆಪದಲ್ಲಿ ಬಾಲಕನ ಅಪಹರಿಸಿ ಹತ್ಯೆ;ಓರ್ವ ಆರೋಪಿ ಬಂಧನ
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಪಟಾಕಿ ಕೊಡಿಸುವುದಾಗಿ ನಂಬಿಸಿ 13 ವರ್ಷದ ಬಾಲಕನನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟು ಬಳಿಕ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದ ವಿನಾಯಕ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿ
boy-kidnapped-on-pretext-of-buying-firecrackers-killed-in-bengaluru


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಪಟಾಕಿ ಕೊಡಿಸುವುದಾಗಿ ನಂಬಿಸಿ 13 ವರ್ಷದ ಬಾಲಕನನ್ನು ಅಪಹರಿಸಿ, ಹಣಕ್ಕಾಗಿ ಬೇಡಿಕೆ ಇಟ್ಟು ಬಳಿಕ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದ ವಿನಾಯಕ ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಜಾಲ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಯಲಹಂಕದ ವಿನಾಯಕ ನಗರದ 13 ವರ್ಷದ ಪ್ರಜ್ವಲ್ ಮೃತಪಟ್ಟ ಬಾಲಕ. ನೆರೆಮನೆಯ ಭಾಸ್ಕರ್ ರೆಡ್ಡಿ ಎಂಬಾತ ಪಟಾಕಿ ಕೊಡಿಸುವುದಾಗಿ ಹೇಳಿ ಬಾಲಕನನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಬಳಿಕ ಬಾಲಕನಿಂದ ವಿಡಿಯೊ ಮಾಡಿಸಿ ಪೋಷಕರಿಗೆ ಹಣಕ್ಕಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.

ಆರೋಪಿಯೊಂದಿಗೆ ಏಡುಕುಂಡಲ ರೆಡ್ಡಿ ಎಂಬಾತನೂ ಇದ್ದ ಎನ್ನಲಾಗಿದ್ದು, ಬಾಲಕನ ಕೈ-ಕಾಲು ಹಾಗೂ ಬಾಯಿಗೆ ಟೇಪ್ ಹಾಕಿ ಹಲ್ಲೆ ನಡೆಸಲಾಗಿದೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಾಲಕನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಹತ್ಯೆಯ ನಂತರ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡು ಆಂಧ್ರಪ್ರದೇಶದತ್ತ ಪರಾರಿಯಾಗಲು ಆರೋಪಿಗಳು ಯತ್ನಿಸಿದ್ದರು ಎನ್ನಲಾಗಿದೆ.

ಚಿಕ್ಕಜಾಲ ಸರ್ವೀಸ್ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾದ ಬಳಿಕ ಸ್ಥಳೀಯರಿಗೆ ಅನುಮಾನ ಮೂಡಿದೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಡಿಕ್ಕಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆರಂಭದಲ್ಲಿ ಅಪಘಾತದಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದರೂ, ತನಿಖೆಯಲ್ಲಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಸ್ಕರ್ ರೆಡ್ಡಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಏಡುಕುಂಡಲ ರೆಡ್ಡಿಗಾಗಿ ಶೋಧ ಮುಂದುವರಿದಿದೆ. ಘಟನೆ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande