ಸೆ.23ರಿಂದ ತರಗತಿಗಳು ಆರಂಭ; ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಮೊದಲ ಬ್ಯಾಚ್: ಎ.ಸಿ.ಪಟ್ಟಣದ
ಬಾಗಲಕೋಟೆ, 18 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ಪ್ರತಿಷ್ಠಿತ ವೀರಪುಲಿಕೇಶಿ ಶಿಕ್ಷಣ ಸಂಸ್ಥೆಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಟೀಚರ್ ಎಜುಕೇಶನ್ ಪ್ರೋಗ್ರಾಂ ಆ
ಪ್ರವೇಶ


ಬಾಗಲಕೋಟೆ, 18 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ಪ್ರತಿಷ್ಠಿತ ವೀರಪುಲಿಕೇಶಿ ಶಿಕ್ಷಣ ಸಂಸ್ಥೆಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯಿಂದ ನಾಲ್ಕು ವರ್ಷಗಳ ಇಂಟಿಗ್ರೇಟೆಡ್ ಟೀಚರ್ ಎಜುಕೇಶನ್ ಪ್ರೋಗ್ರಾಂ ಆರಂಭಿಸಲು ಅಧಿಕೃತ ಅನುಮತಿ ದೊರೆತಿದ್ದು, ಸೆ.23ರಿಂದ ಕೋರ್ಸ್ನ ತರಗತಿಗಳು ಆರಂಭವಾಗಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎ.ಸಿ.ಪಟ್ಟಣದ ತಿಳಿಸಿದರು.

ನಗರದ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಐಟೆಪ್ ಕೋರ್ಸ್ ಆರಂಭಿಸಿರುವುದು ಮಹತ್ವದ ಮೈಲಿಗಲ್ಲಾಗಿದೆ. ಕೋರ್ಸ್ಗೆ ಸಂಬಂಧಿಸಿದ ಶಾಸನಬದ್ಧ ದಾಖಲೆಗಳು ಹಾಗೂ ಗೆಜೆಟ್ ಆದೇಶಗಳು ಸಂಸ್ಥೆಯ ಬಳಿ ಲಭ್ಯವಿದ್ದು, ನಿಯಮಾನುಸಾರವೇ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಬಾರಿಗೆ ಬಿ.ಕಾಂ–ಬಿ.ಎಡ್ ಕೋರ್ಸ್ ಅನ್ನು ಅಧಿಕೃತವಾಗಿ ಆರಂಭಿಸುತ್ತಿರುವ ಕಾಲೇಜು ಎಂಬ ಹೆಗ್ಗಳಿಕೆಗೆ ಸಂಸ್ಥೆ ಪಾತ್ರವಾಗಿದೆ ಎಂದು ಎ.ಸಿ.ಪಟ್ಟಣದ ಹೇಳಿದರು. ನಾಲ್ಕು ವರ್ಷಗಳ ಅವಧಿಯಲ್ಲಿ ಪದವಿ ಮತ್ತು ಬಿ.ಎಡ್ ಶಿಕ್ಷಣವನ್ನು ಸಂಯೋಜಿತವಾಗಿ ಪೂರ್ಣಗೊಳಿಸಲು ಅವಕಾಶ ಇರುವುದರಿಂದ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಮೂಲ್ಯ ಸಮಯ ಉಳಿತಾಯವಾಗಲಿದೆ ಎಂದರು.

ಮೂರು ವಿಭಾಗಗಳಲ್ಲಿ ಅವಕಾಶ

ಐಟೆಪ್ ಅಡಿಯಲ್ಲಿ ಬಿ.ಕಾಂ–ಬಿ.ಎಡ್ ಮೂಲಕ ವಾಣಿಜ್ಯ ಮತ್ತು ಬಿಸಿನೆಸ್ ಸ್ಟಡೀಸ್ ಬೋಧನಾ ತರಬೇತಿ, ಬಿಎ–ಬಿ.ಎಡ್ ಮೂಲಕ ಮಾನವಿಕ ಮತ್ತು ಸಮಾಜ ವಿಜ್ಞಾನಗಳ ಬೋಧನಾ ತರಬೇತಿ ಹಾಗೂ ಬಿಎಸ್ಸಿ–ಬಿ.ಎಡ್ ಮೂಲಕ ಶುದ್ಧ ಮತ್ತು ಅನ್ವಯಿಕ ವಿಜ್ಞಾನಗಳ ಬೋಧನಾ ತರಬೇತಿ ಪಡೆಯಲು ಅವಕಾಶವಿದೆ ಎಂದು ಅವರು ವಿವರಿಸಿದರು.

ಈ ಕೋರ್ಸ್ಗಳಿಗೆ ಪ್ರವೇಶವು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ನ್ಯಾಷನಲ್ ಕಾಮನ್ ಎಂಟ್ರೆನ್ಸ್ ಟೆಸ್ಟ್ ಮೂಲಕ ನಡೆಯಲಿದೆ. ಕೋರ್ಸ್ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗಳಲ್ಲಿ ಲಭ್ಯವಿರುವ ಅರ್ಹತೆ ಮತ್ತು ನಿಯಮಾನುಸಾರ ಅವಕಾಶಗಳನ್ನು ಪಡೆಯಲು ನೆರವಾಗಲಿದೆ ಎಂದು ತಿಳಿಸಿದರು.

ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ

ಬಾಗಲಕೋಟೆ ಜಿಲ್ಲೆಯ ಬಾದಾಮಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಎ.ಸಿ.ಪಟ್ಟಣದ ಹೇಳಿದರು.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿಯಿಂದ 'B+' ಗ್ರೇಡ್ ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಶೈಕ್ಷಣಿಕ ಹಾಗೂ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸೈಕಾಲಜಿ, ಸೈನ್ಸ್, ಕನ್ನಡ, ಇತಿಹಾಸ ಹಾಗೂ ಇಂಗ್ಲಿಷ್ ವಿಷಯಗಳಿಗೆ ಸಂಬಂಧಿಸಿದ ಪ್ರಯೋಗಾಲಯಗಳು, ಡಿಜಿಟಲ್ ಲೈಬ್ರರಿ, ಆಧುನಿಕ ಕಂಪ್ಯೂಟರ್ ಹಾಗೂ ಐಸಿಟಿ ಲ್ಯಾಬ್, ಪ್ಲೇಸ್ಮೆಂಟ್ ಸೆಲ್ ಸೇರಿದಂತೆ ವಿವಿಧ ಸೌಲಭ್ಯಗಳಿವೆ ಎಂದು ವಿವರಿಸಿದರು.

ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ವೃತ್ತಿಪರ ಮಾರ್ಗದರ್ಶನ ಕೋಶ ಕಾರ್ಯನಿರ್ವಹಿಸುತ್ತಿದೆ. ಎನ್ಎಸ್ಎಸ್ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಉಚಿತ ವೈ-ಫೈ ಹಾಗೂ ಡಿಜಿಟಲ್ ಲರ್ನಿಂಗ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಹೇಳಿದರು.

ಪ್ರಥಮ ವರ್ಷದ 18 ವಿದ್ಯಾರ್ಥಿಗಳಿಗೆ ಪ್ರವೇಶ

ಸಂಸ್ಥೆಯ ಪ್ರಾಚಾರ್ಯ ಡಾ.ಎ.ಎ.ತೋಪಲಕಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಐಟೆಪ್ ಕೋರ್ಸ್ ಆರಂಭವಾಗುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ಬ್ಯಾಚ್ಗೆ 18 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸೆ.23ರಿಂದ ತರಗತಿಗಳು ಆರಂಭವಾಗಲಿವೆ ಎಂದು ತಿಳಿಸಿದರು.

ನಾಲ್ಕು ವರ್ಷಗಳ ಸಮಗ್ರ ಶಿಕ್ಷಣದ ಮೂಲಕ ವಿಷಯಾಧಾರಿತ ಪದವಿ ಜತೆಗೆ ಶಿಕ್ಷಕ ವೃತ್ತಿಗೆ ಅಗತ್ಯವಾದ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಹಾಗೂ ಶಿಕ್ಷಕ ವೃತ್ತಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಐಟೆಪ್ ಕೋರ್ಸ್ನ ಸಂಯೋಜಕ ಡಾ.ಬೆಟ್ಟಪ್ಪ ಕಾಟಾಪೂರ ಹಾಗೂ ಸಂಸ್ಥೆಯ ಆಡಳಿತಾಧಿಕಾರಿ ಅಶೋಕ ಜವಳಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande