


ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಳ್ಳಾರಿ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯನ್ನು ಹೊಂದಿರುವ ದಲಿತ ಸಮುದಾಯದವರಿಗೆ ಸೂಕ್ತವಾದ ರಾಜಕೀಯ ಪ್ರಾತಿನಿಧ್ಯ ಸಿಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ಧಾರೆ.
ಡಾ.ಬಿ.ಆರ್. ಅಂಬೇಡ್ಕರ್ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಚಟುವಟಿಕೆಗಳಿಗಾಗಿ ವೈಯಕ್ತಿಕವಾಗಿ 10 ಲಕ್ಷ ರೂ.ಗಳ ದೇಣಿಗೆ ನೀಡಿದ ಅವರು, ದಲಿತ ಸಮುದಾಯವು ಇಂದಿಗೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಕೆಲವೇ ಕೆಲವು ವ್ಯಕ್ತಿಗಳಿಗೆ ಅಧಿಕಾರ ಸಿಕ್ಕರೆ ಸಾಲದು, ಈ ಸಮುದಾಯದ ಅಭಿವೃದ್ಧಿಗಾಗಿ ಇನ್ನೂ ಅನೇಕರಿಗೆ ಮತ್ತಷ್ಟು ರಾಜಕೀಯ ಅಧಿಕಾರ ಸಿಗಬೇಕು. ದಲಿತ ಸಮುದಾಯದವರ ಅಭಿವೃದ್ಧಿಗೆ ನಾನು ಬದ್ಧನಾಗಿದ್ದೇನೆ ಎಂದರು.
ದಲಿತ ಮುಖಂಡ ಎ. ಮಾನಯ್ಯ ಅವರು, ದಲಿತರು ರಾಜಕೀಯವಾಗಿ ಯಾವ ಪಕ್ಷಕ್ಕೆ - ಯಾವ ಅಭ್ಯರ್ಥಿಗೆ ಬೆಂಬಲಿಸಬೇಕು ಎನ್ನುವ ನಿರ್ಧಾರವನ್ನು ಕೈಗೊಳ್ಳುವಾಗ ತುಂಬಾ ಎಚ್ಚರಿಕೆವಹಿಸಬೇಕು. ದಲಿತರ ಪರ - ಅಂಬೇಡ್ಕರ್ ಪರ ಹಾಗೂ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇರುವಂಥಹವರನ್ನು ಹಾಗೂ ಪಕ್ಷಗಳನ್ನು ಬೆಂಬಲಿಸಬೇಕು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ ಅವರು, ಶಾಸಕ ನಾರಾ ಭರತರೆಡ್ಡಿ ಅವರು ಕ್ಷೇತ್ರದ ಅಭಿವೃದ್ಧಿಯ ಪರವಾಗಿದ್ದಾರೆ. ಅಹಿಂದ ಹಿತಕ್ಕಾಗಿ ಶ್ರಮಿಸುತ್ತಿದ್ದಾರೆ. ಎಲ್ಲಾ ಸಮಾಜ, ಎಲ್ಲಾ ಜಾತಿ, ವರ್ಗಗಳ ಹಿತವನ್ನು ಕಾಪಾಡಲು, ಶಾಂತಿಯನ್ನು ಕಾಪಾಡಲು ಶ್ರಮಿಸುತ್ತಿದ್ದಾರೆ. ಜನ ಸೇವೆಯೇ ಅವರ ಮೊದಲ ಆದ್ಯತೆ ಆಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ಎಲ್. ಮಾರೆಣ್ಣ, ಎರುಕುಲಸ್ವಾಮಿ, ಸೋಮಶೇಖರ್, ಎಂ. ಸೋಮಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಗೋವಿಂದು, ಉದ್ಯಮಿ ಎಂ.ಜಿ. ಗೌಡ ಇನ್ನಿತರರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್