ಸಾಕುಪ್ರಾಣಿಗಳ ವಿಮಾನ ಪ್ರಯಾಣದಲ್ಲಿ ಬೆಂಗಳೂರು ಮುಂಚೂಣಿ: ಅಕಾಸಾ ಏರ್
ಅಕಾಸಾ ಏರ್
ಸಾಕುಪ್ರಾಣಿಗಳ ವಿಮಾನ ಪ್ರಯಾಣದಲ್ಲಿ ಬೆಂಗಳೂರು ಮುಂಚೂಣಿ: ಅಕಾಸಾ ಏರ್


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಸಾಕುಪ್ರಾಣಿಗಳೊಂದಿಗೆ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯಲ್ಲಿ ಬೆಂಗಳೂರು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಅಕಾಸಾ ಏರ್ ತಿಳಿಸಿದೆ.

ವಿಮಾನಯಾನ ಸಂಸ್ಥೆಯ ‘ಪೆಟ್ಸ್ ಆನ್ ಅಕಾಸಾ’ ಸೇವೆಯಡಿ 2022ರ ನವೆಂಬರ್ನಲ್ಲಿ ಸೇವೆ ಆರಂಭಿಸಿದ ಬಳಿಕ 2026ರ ಫೆಬ್ರುವರಿ ವೇಳೆಗೆ 10 ಸಾವಿರಕ್ಕೂ ಅಧಿಕ ಸಾಕುಪ್ರಾಣಿಗಳನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಅಕಾಸಾ ಏರ್ನ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರು–ದೆಹಲಿ–ಬೆಂಗಳೂರು ಮಾರ್ಗವು ಸಾಕುಪ್ರಾಣಿಗಳ ಪ್ರಯಾಣದಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಒಟ್ಟು ಸಾಕುಪ್ರಾಣಿ ಪ್ರಯಾಣದ ಶೇ 13.66ರಷ್ಟು ಈ ಮಾರ್ಗದಲ್ಲೇ ದಾಖಲಾಗಿದೆ.

ಹಬ್ಬದ ಅವಧಿಯ ಅಕ್ಟೋಬರ್ ನಿಂದ ಡಿಸೆಂಬರ್ ರೆಗೆ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚಾಗಿದ್ದು, ಈ ಅವಧಿಯಲ್ಲಿ ವಾರ್ಷಿಕ ಪ್ರಯಾಣದ ಸುಮಾರು ಶೇ 35ರಷ್ಟು ದಾಖಲಾಗಿದೆ.

ಒಟ್ಟು ಪ್ರಯಾಣಿಸಿದ ಸಾಕುಪ್ರಾಣಿಗಳಲ್ಲಿ ಶೇ 60ರಷ್ಟು ನಾಯಿಗಳು ಹಾಗೂ ಶೇ 40ರಷ್ಟು ಬೆಕ್ಕುಗಳಾಗಿವೆ. ಶೇ 93ರಷ್ಟು ಸಾಕುಪ್ರಾಣಿಗಳು ಕ್ಯಾಬಿನ್ನಲ್ಲೇ ಪ್ರಯಾಣಿಸಿದ್ದು, ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ತಮ್ಮೊಂದಿಗೇ ಇಟ್ಟುಕೊಂಡು ಪ್ರಯಾಣಿಸಲು ಹೆಚ್ಚಿನ ಆದ್ಯತೆ ನೀಡುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅಕಾಸಾ ಏರ್ ತಿಳಿಸಿದೆ.

“ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸುವ ಗ್ರಾಹಕರಿಗೆ ಅನುಕೂಲವಾಗುವಂತೆ ಸೇವೆಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದೆ. ‘ಪೆಟ್ಸ್ ಆನ್ ಅಕಾಸಾ’ ಸೇವೆಗೆ ದೊರೆತ ಪ್ರತಿಕ್ರಿಯೆ ಸಾಕುಪ್ರಾಣಿಗಳೊಂದಿಗೆ ಸುರಕ್ಷಿತ ಹಾಗೂ ಅನುಕೂಲಕರ ಪ್ರಯಾಣಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ತೋರಿಸುತ್ತದೆ” ಎಂದು ಸಂಸ್ಥೆ ತಿಳಿಸಿದೆ.

ಸಾಕುಪ್ರಾಣಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಅಕಾಸಾ ಏರ್ ಒಂದು ವಿಮಾನದಲ್ಲಿ ಗರಿಷ್ಠ ಮೂರು ಸಾಕುಪ್ರಾಣಿಗಳಿಗೆ ಅವಕಾಶ ನೀಡುತ್ತಿದ್ದು, ಕ್ಯಾಬಿನ್ನಲ್ಲಿ ಸಾಕುಪ್ರಾಣಿಗಳು ಮತ್ತು ಅವುಗಳ ಕ್ಯಾರಿಯರ್ ಸೇರಿ ಗರಿಷ್ಠ 10 ಕೆ.ಜಿ. ತೂಕದ ಮಿತಿಯನ್ನು ನಿಗದಿಪಡಿಸಿದೆ.

ದೇಶೀಯ ವಿಮಾನಗಳಲ್ಲಿ ಬೆಕ್ಕು ಮತ್ತು ನಾಯಿಗಳನ್ನು ಕ್ಯಾಬಿನ್ ಅಥವಾ ತೂಕದ ಆಧಾರದ ಮೇಲೆ ಕಾರ್ಗೋ ಮೂಲಕ ಸಾಗಿಸಲು ಅವಕಾಶವಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande