
ಬಾಗಲಕೋಟೆ, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : 2028ರ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿಕೊಂಡು ರಾಜ್ಯ ಕಾಂಗ್ರೆಸ್ನಲ್ಲಿ ಸಂಘಟನಾ ಪುನರ್ರಚನೆಗೆ ಮುಂದಾಗಿರುವ ಪಕ್ಷದ ವರಿಷ್ಠರು, ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಹತ್ವದ ಜವಾಬ್ದಾರಿಯ ಜತೆಗೆ ಕಠಿಣ ಪರೀಕ್ಷೆಯನ್ನೂ ವಿಧಿಸಿರುವುದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ.
ಹೊಸದಾಗಿ ನೇಮಕಗೊಂಡಿರುವ ಜಿಲ್ಲಾಧ್ಯಕ್ಷರು ಆರು ತಿಂಗಳ ಅವಧಿಯಲ್ಲಿ ತಮ್ಮ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಈ ಅವಧಿಯಲ್ಲಿನ ಕಾರ್ಯವೈಖರಿ ಹಾಗೂ ಸಂಘಟನಾ ಪ್ರಗತಿಯನ್ನು ಪರಿಶೀಲಿಸಿ, ನಿರೀಕ್ಷಿತ ಮಟ್ಟದ ಸಾಧನೆ ಕಂಡುಬರದಿದ್ದರೆ ಅಧ್ಯಕ್ಷರ ಬದಲಾವಣೆಗೂ ವರಿಷ್ಠರು ಹಿಂದೇಟು ಹಾಕುವುದಿಲ್ಲ ಎನ್ನುವ ಸಂದೇಶ ಸಭೆಯಲ್ಲಿ ನೀಡಲಾಗಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ.
ಬುಧವಾರ ನಡೆದ ನೂತನ ಜಿಲ್ಲಾಧ್ಯಕ್ಷರ ಸಭೆಯಲ್ಲಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಹಲವು ಸೂಚನೆಗಳನ್ನು ನೀಡಲಾಗಿದ್ದು, ಜಿಲ್ಲೆಗಳಲ್ಲಿ ಪಕ್ಷವನ್ನು ಬಲಪಡಿಸುವುದು, ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸುವುದು, ಮುಂಬರುವ ಚುನಾವಣೆಗಳಿಗೆ ಸಂಘಟನೆಯನ್ನು ಸಜ್ಜುಗೊಳಿಸುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ಜಿಲ್ಲಾಧ್ಯಕ್ಷರ ಹೆಗಲಿಗೆ ಹಾಕಲಾಗಿದೆ ಎನ್ನಲಾಗಿದೆ. ಆರು ತಿಂಗಳ ಬಳಿಕ ನಡೆಯಲಿರುವ ಕಾರ್ಯಕ್ಷಮತಾ ಪರಿಶೀಲನೆ ಇದೀಗ ನೂತನ ಅಧ್ಯಕ್ಷರ ಮುಂದಿರುವ ಪ್ರಮುಖ ಸವಾಲಾಗಿದೆ.
ಸಂಘಟನೆಗೆ ಸವಾಲಾಗಿರುವ ಆಂತರಿಕ ಭಿನ್ನಾಭಿಪ್ರಾಯ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ನೊಳಗೆ ಮುಖಂಡರ ನಡುವಿನ ಭಿನ್ನಾಭಿಪ್ರಾಯ, ಬಣ ರಾಜಕಾರಣ ಹಾಗೂ ಸ್ಥಳೀಯ ಮಟ್ಟದ ರಾಜಕೀಯ ಸಂಘರ್ಷಗಳು ಇರುವ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರ ಜವಾಬ್ದಾರಿ ಮತ್ತಷ್ಟು ಕಠಿಣವಾಗಿದೆ. ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಹಿರಿಯ ಮುಖಂಡರ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಎಲ್ಲರನ್ನೂ ಒಂದೇ ವೇದಿಕೆಗೆ ತಂದು ಪಕ್ಷ ಸಂಘಟನೆ ನಡೆಸುವುದು ಸುಲಭದ ಕೆಲಸವಲ್ಲ.
ಆಡಳಿತಾರೂಢ ಕಾಂಗ್ರೆಸ್ನಲ್ಲಿಯೂ ಈ ರೀತಿಯ ಆಂತರಿಕ ಭಿನ್ನಾಭಿಪ್ರಾಯಗಳು ಅಲ್ಲಲ್ಲಿ ಬಹಿರಂಗವಾಗುತ್ತಿವೆ. ನಾಯಕತ್ವ ಬದಲಾವಣೆ, ಸಚಿವ ಸಂಪುಟಕ್ಕೆ ಸೇರ್ಪಡೆ, ಪಕ್ಷದ ವಿವಿಧ ಹುದ್ದೆಗಳ ನೇಮಕ ಸೇರಿದಂತೆ ಹಲವು ವಿಚಾರಗಳು ಕೆಲವೆಡೆ ಬಣ ರಾಜಕಾರಣಕ್ಕೆ ಕಾರಣವಾಗಿವೆ ಎಂಬ ಚರ್ಚೆ ಪಕ್ಷದೊಳಗೆ ನಡೆಯುತ್ತಿದೆ.
ಬಾಗಲಕೋಟೆಯಲ್ಲೂ ಬದಲಾವಣೆ ಪರ್ವ
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ನಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹಲವು ಮಹತ್ವದ ಬದಲಾವಣೆಗಳು ನಡೆದಿವೆ. ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರ ಬದಲಿಗೆ ದಯಾನಂದ ಪಾಟೀಲರನ್ನು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದು, ಮುಧೋಳ ಶಾಸಕ ಆರ್.ಬಿ. ತಿಮ್ಮಾಪುರ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದೆ.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಹಲವರು ಅರ್ಜಿ ಸಲ್ಲಿಸಿದ್ದರೂ ದಯಾನಂದ ಪಾಟೀಲರ ನೇಮಕವಾಗಿರುವುದು ಕೆಲವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧ್ಯಕ್ಷರು ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಶಾಸಕರು, ಹಿರಿಯ ಮುಖಂಡರು ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳನ್ನು ಭೇಟಿ ಮಾಡಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಬಣ ರಾಜಕಾರಣಕ್ಕೆ ಬ್ರೇಕ್ ಹಾಕುವುದು ಸುಲಭವಲ್ಲ
ನೂತನ ಅಧ್ಯಕ್ಷರ ಮುಂದೆ ಕೇವಲ ಪಕ್ಷದ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ಮಾತ್ರವಲ್ಲ, ವಿವಿಧ ಬಣಗಳ ನಡುವೆ ಸಮನ್ವಯ ಸಾಧಿಸುವ ಸವಾಲೂ ಇದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಚಿವರು, ಶಾಸಕರು ಹಾಗೂ ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಸಂಘಟನೆಯನ್ನು ಮುನ್ನಡೆಸಬೇಕಿದೆ. ಪ್ರತಿಯೊಬ್ಬರ ರಾಜಕೀಯ ಹಿತಾಸಕ್ತಿಯನ್ನು ಸಮತೋಲನದಲ್ಲಿಟ್ಟುಕೊಂಡು ಸಂಘಟನೆಗೆ ಆದ್ಯತೆ ನೀಡುವುದು ಜಿಲ್ಲಾಧ್ಯಕ್ಷರ ಸಂಘಟನಾ ಕೌಶಲ್ಯಕ್ಕೆ ಪರೀಕ್ಷೆಯಾಗಲಿದೆ.
ಬಾಗಲಕೋಟೆಯಲ್ಲಿ ಬಿಟಿಡಿಎ ವಿಚಾರ ಮತ್ತೆ ಮುನ್ನೆಲೆಗೆ
ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ನ ಆಂತರಿಕ ಬೆಳವಣಿಗೆಗಳು ಈ ಸವಾಲಿನ ಸ್ವರೂಪವನ್ನು ಮತ್ತಷ್ಟು ಸ್ಪಷ್ಟಪಡಿಸಿವೆ. ಬಿಟಿಡಿಎ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಿ ಶಾಸಕರ ಬೆಂಬಲಿಗರು ಎನ್ನಲಾದವರು ಪ್ರತಿಭಟನೆ ನಡೆಸಿರುವುದು ಹಾಗೂ ಮುಖ್ಯಮಂತ್ರಿಗಳ ಕ್ಷೇತ್ರ ಭೇಟಿಯ ಸಂದರ್ಭದಲ್ಲಿ ಬಿಟಿಡಿಎ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸುವ ಫಲಕಗಳನ್ನು ಪ್ರದರ್ಶಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಬಿಟಿಡಿಎ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಬೆಳವಣಿಗೆ ಪಕ್ಷದ ಸಂಘಟನೆಯ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಅಧ್ಯಕ್ಷರ ಬದಲಾವಣೆಗೆ ಆಗ್ರಹ ಮುಂದುವರಿದಿರುವುದು ಕ್ಷೇತ್ರದೊಳಗಿನ ಆಂತರಿಕ ಭಿನ್ನಾಭಿಪ್ರಾಯ ಇನ್ನೂ ಸಂಪೂರ್ಣವಾಗಿ ಶಮನಗೊಂಡಿಲ್ಲ ಎನ್ನುವ ಚರ್ಚೆಗೆ ಕಾರಣವಾಗಿದೆ.
ಬಾದಾಮಿಯಲ್ಲೂ ಭಿನ್ನಮತದ ನೆರಳು
ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿಯೂ ಕಾಂಗ್ರೆಸ್ನೊಳಗಿನ ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳು ಆಗಾಗ್ಗೆ ಮುನ್ನೆಲೆಗೆ ಬರುತ್ತಿವೆ. ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹಾಗೂ ಅವರ ವಿರೋಧಿ ಗುಂಪಿನ ನಡುವೆ ವಿವಿಧ ಸಂದರ್ಭಗಳಲ್ಲಿ ಅಪಸ್ವರಗಳು ವ್ಯಕ್ತವಾಗುತ್ತಿವೆ ಎನ್ನಲಾಗಿದೆ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಾದಾಮಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸುವ ವಿಚಾರವೂ ರಾಜಕೀಯ ಚರ್ಚೆಗೆ ಕಾರಣವಾಯಿತು. ಶಾಸಕರು ಹೆಲಿಪ್ಯಾಡ್ನಲ್ಲಿ ಸ್ವಾಗತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮಾರ್ಗಮಧ್ಯೆ ಅವರನ್ನು ಸ್ವಾಗತಿಸಿದ ಘಟನೆ ಗಮನ ಸೆಳೆಯಿತು.
ಇದರ ಬೆನ್ನಲ್ಲೇ ಸಿದ್ದರಾಮಯ್ಯ ಬೆಂಬಲಿಗರ ಬಳಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ ಎನ್ನುವ ಚರ್ಚೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಬಾದಾಮಿ ಕ್ಷೇತ್ರದ ಕಾಂಗ್ರೆಸ್ ರಾಜಕಾರಣದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎನ್ನುವುದು ಕುತೂಹಲ ಮೂಡಿಸಿದೆ.
ಆರು ತಿಂಗಳೊಳಗೆ ಸಂಘಟನಾ ಸಾಮರ್ಥ್ಯ ಸಾಬೀತುಪಡಿಸಬೇಕಿದೆ
ಈ ಎಲ್ಲ ಬೆಳವಣಿಗೆಗಳ ನಡುವೆ ನೂತನ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲರ ಮುಂದೆ ದೊಡ್ಡ ಜವಾಬ್ದಾರಿ ಇದೆ. ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಸಮನ್ವಯಗೊಳಿಸಿ, ಶಾಸಕರು, ಹಿರಿಯ ಮುಖಂಡರು, ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತರುವುದು ಅವರ ಮುಂದಿರುವ ಪ್ರಮುಖ ಸವಾಲಾಗಿದೆ.
2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವುದು, ಬೂತ್ ಮಟ್ಟದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಹಾಗೂ ಪಕ್ಷದೊಳಗಿನ ಅಸಮಾಧಾನವನ್ನು ಕಡಿಮೆ ಮಾಡುವುದು ನೂತನ ಅಧ್ಯಕ್ಷರ ಕಾರ್ಯಕ್ಷಮತೆಯ ಪ್ರಮುಖ ಅಂಶಗಳಾಗಲಿವೆ.
ಪಕ್ಷದ ವರಿಷ್ಠರು ನಿಗದಿಪಡಿಸಿರುವ ಆರು ತಿಂಗಳ ಕಾರ್ಯಕ್ಷಮತಾ ಪರಿಶೀಲನೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಸಂಘಟನಾ ಸಾಮರ್ಥ್ಯವನ್ನು ಯಾವ ರೀತಿಯಲ್ಲಿ ಪ್ರದರ್ಶಿಸುತ್ತಾರೆ ಎಂಬುದು ಈಗ ರಾಜಕೀಯ ವಲಯದ ಗಮನ ಸೆಳೆದಿದೆ.
ಬಾಗಲಕೋಟೆ ಮತ್ತು ಬಾದಾಮಿ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಸಮನ್ವಯದ ಮೂಲಕ ಪರಿಹಾರ ಕಂಡುಕೊಂಡು, ಪಕ್ಷವನ್ನು ಒಗ್ಗಟ್ಟಿನಿಂದ ಮುನ್ನಡೆಸಲು ನೂತನ ಜಿಲ್ಲಾಧ್ಯಕ್ಷರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎನ್ನುವುದು ಅವರ ಸಂಘಟನಾತ್ಮಕ ಜಾಣ್ಮೆಗೆ ಪ್ರಮುಖ ಮಾನದಂಡವಾಗಬಹುದು ಎಂದು ಪತ್ರಕರ್ತ ಹಾಗೂ ರಾಜಕೀಯ ವಿಶ್ಲೇಷಕ ಅಮೋಘ ತಳವಾರ ವಿಶ್ಲೇಷಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande