
ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಭೂಮಿಯ ಮೇಲೆ ಜೀವಿಗಳು ಬದುಕಲು ಓಝೋನ್ ಬೆಂಬಲ ಅತ್ಯಗತ್ಯ ಎಂದು ಅನಂತಪುರಂ ಜಿಲ್ಲೆಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ರಾವೂರಿ ರಾಮಕೃಷ್ಣ ರೆಡ್ಡಿ ಅವರು ತಿಳಿಸಿದ್ದಾರೆ.
ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಭೌತಶಾಸ್ತ್ರ ವಿಭಾಗವು `ಅಂತಾರಾಷ್ಟ್ರೀಯ ಓಝೋನ್ ಪದರ ಸಂರಕ್ಷಣಾ ದಿನಾಚರಣೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಓಝೋನ್ ಪದರವು ಕ್ರಮೇಣ ಕ್ಷೀಣಿಸುತ್ತಾ ಆರೋಗ್ಯದ ಅನೇಕ ಸಮಸ್ಯೆಗಳು ಎದುರಾಗಲಿವೆ. ಓಝೋನ್ ಪದರವನ್ನು ಸಂರಕ್ಷಿಸಿಕೊಳ್ಳುವ ಹೊಣೆ ಪ್ರತಿಯೊಬ್ಬರ ಮೇಲೂ ಇದೆ. ಪ್ರತಿವರ್ಷ ಸೆಪ್ಟೆಂಬರ್ 16ರಂದು ವಿಶ್ವ ಓಝೋನ್ ದಿನವನ್ನಾಗಿ ಆಚರಿಸಲಾಗುತ್ತದೆ. ಭೂಮಿಯನ್ನು ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ ರಕ್ಷಿಸುವಲ್ಲಿ ಓಝೋನ್ ಪದರದ ಪಾತ್ರವನ್ನು ಜನರಿಗೆ ತಿಳಿಸುವ ಉದ್ದೇಶವೇ ಈ ದಿನದ ಆಚರಣೆಯಲ್ಲಿ ಮಹತ್ವ ಅಡಗಿದೆ ಎಂದು ಹೇಳಿದರು.
ಸೂರ್ಯನಿಂದ ಹೊರಹೊಮ್ಮುವ ಕಿರಣಗಳು ನೇರವಾಗಿ ಭೂಮಿಗೆ ತಲುಪದಂತೆ, ಹಾನಿಕಾರಕ ಅತಿನೇರಳೆ ಕಿರಣಗಳನ್ನು ಓಝೋನ್ ಪದರವು ಹೀರಿಕೊಂಡು ಜೀವಜಗತ್ತಿಗೆ ರಕ್ಷಣೆ ನೀಡುತ್ತದೆ.
ಮೋಟಾರು ವಾಹನಗಳ ಸಂಖ್ಯೆ ಹೆಚ್ಚಾಗುವುದು, ಕೈಗಾರಿಕಾ ಮಾಲಿನ್ಯ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಏರ್ ಕಂಡೀಷನರ್ಗಳ ಬಳಕೆಯಿಂದ ಓಜೋನ್ ಪದರ ಕ್ಷೀಣಿಸುತ್ತಿದೆ. ಈ ಸಮಸ್ಯೆಯನ್ನು ಗಮನಿಸಿ 1987ರಲ್ಲಿ ಮಾಂಟ್ರಿಯಲ್ ಪೆÇ್ರೀಟೋಕಾಲ್ ಜಾರಿಗೆ ತರಲಾಯಿತು ಎಂದು ಅವರು ಸ್ಮರಿಸಿದರು.
ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಯುವ ವಿಜ್ಞಾನಿಯಾಗಿರುವ ಡಾ.ಕೆ. ಓಬಳರೆಡ್ಡಿ ಅವರು, ಓಝೋನ್ ಪದರದ ಕುರಿತು ಪ್ರಬಂಧವನ್ನು ಮಂಡಿಸುವ ಮೂಲಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಓಝೋನ್ ಪದರದ ಕುರಿತು ಜಾಗೃತಿ ಮೂಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜಿ. ಪ್ರಹ್ಲಾದ್ ಚೌದ್ರಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಮಂಜುನಾಥ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕರಾದ ಡಾ. ರಮಾಭಾಯಿ, ಡಾ. ಟಿ. ದೊಡ್ಡಬಸವರಾಜ ಅವರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಚಿನ್ಮಯಿ ಪ್ರಾರ್ಥಿಸಿದರು. ವಿದ್ಯಾರ್ತಿಗಳಾದ ವೀಣಾ ಮತ್ತು ಸ್ನೇಹಶ್ರೀ ಅವರು ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವರ್ಷ ಅವರು ವಂದನಾರ್ಪಣೆ ಸಲ್ಲಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್