ಎಂ.ಎಸ್. ಸುಬ್ಬುಲಕ್ಷ್ಮಿ ಜೀವನಾಧಾರಿತ ಬಯೋಪಿಕ್ ಘೋಷಣೆ: ರಾಶ್ಮಿಕಾ ಮಂದಣ್ಣ ನಾಯಕಿ
ಬಯೋಪಿಕ್ ಘೋಷಣೆ: ರಾಶ್ಮಿಕಾ ಮಂದಣ್ಣ ನಾಯಕಿ
MS-Subbulakshmi-biopic-announced-Rashmika-Mandanna-to-play-iconic-singer


ಚೆನ್ನೈ, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಭಾರತ ರತ್ನ ಪುರಸ್ಕೃತ ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ. ಅವರ 110ನೇ ಜಯಂತಿ ಅಂಗವಾಗಿ ಚೆನ್ನೈನ ‘ದಿ ಮ್ಯೂಸಿಕ್ ಅಕಾಡೆಮಿ’ಯಲ್ಲಿ ಚಿತ್ರವನ್ನು ಪ್ರಕಟಿಸಲಾಗಿದೆ.

ಚಿತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ನಟಿ ರಾಶ್ಮಿಕಾ ಮಂದಣ್ಣ ನಿರ್ವಹಿಸಲಿದ್ದಾರೆ. ಅವರ ಸಂಗೀತ ಪಯಣ, ವೈಯಕ್ತಿಕ ಜೀವನ, ಹೋರಾಟಗಳು, ಆಧ್ಯಾತ್ಮಿಕತೆ ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ನೀಡಿದ ಕೊಡುಗೆಯನ್ನು ಚಿತ್ರದಲ್ಲಿ ಕಟ್ಟಿಕೊಡುವ ಉದ್ದೇಶ ಹೊಂದಲಾಗಿದೆ.

ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಲಿದ್ದು, ಗೌತಮ್ ತಿನ್ನನೂರಿ ನಿರ್ದೇಶನ ಮಾಡಲಿದ್ದಾರೆ. ಅಲ್ಲು ಅರವಿಂದ್, ರಾಕ್ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದಾರೆ.

“ಅನೇಕ ವರ್ಷಗಳ ನಿರಂತರ ಪ್ರಯತ್ನದ ಬಳಿಕ ಅಗತ್ಯ ಹಕ್ಕುಗಳು, ಸಾಹಿತ್ಯಿಕ ಮೂಲಗಳು ಹಾಗೂ ಕುಟುಂಬದ ಸಮ್ಮತಿಯನ್ನು ಪಡೆದುಕೊಂಡು, ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನವನ್ನು ಗೌರವ ಮತ್ತು ಸತ್ಯಸಂಧತೆಯಿಂದ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಅವರ ಭಕ್ತಿ, ಶ್ರದ್ಧೆ ಹಾಗೂ ಭಾರತೀಯ ಸಾಂಸ್ಕೃತಿಕ ಪರಂಪರೆಗೆ ನೀಡಿದ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಈ ಬಯೋಪಿಕ್ನ ಉದ್ದೇಶ,” ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಭಾರತೀಯ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಅಪಾರ ಸಾಧನೆ ಮತ್ತು ಜಾಗತಿಕ ಮಟ್ಟದಲ್ಲಿ ಅವರು ಮೂಡಿಸಿದ ಛಾಪನ್ನು ಬೆಳ್ಳಿತೆರೆಯ ಮೂಲಕ ಹೊಸ ತಲೆಮಾರಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಚಿತ್ರ ಮೂಡಿಬರಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande