ಮತ್ತೆ 23 ತಾಲ್ಲೂಕುಗಳು ಬರಪೀಡಿತ: ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ
ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ
Karnataka-Government-Declares-23-More-Taluks-Drought-Hit-Tally-Rises-to-124


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ಮುಂದುವರಿದ ಒಣಹವೆಯ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ಕುರಿತು ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ವತಿಯಿಂದ ಸೆ.17ರಂದು ಅಧಿಕೃತ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಆ.27ರಂದು ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಉಳಿದ 139 ತಾಲೂಕುಗಳಲ್ಲಿನ ಪರಿಸ್ಥಿತಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ವೈಜ್ಞಾನಿಕವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ಉಪ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ನೈಸರ್ಗಿಕ ವಿಕೋಪಗಳ ಸಂಪುಟ ಉಪಸಮಿತಿ ಸಭೆಯ ನಿರ್ದೇಶನದಂತೆ 24 ತಾಲೂಕುಗಳ 214 ಹಳ್ಳಿಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ‘ಗ್ರೌಂಡ್ ಟ್ರೂಥಿಂಗ್’ ನಡೆಸಿ ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಲಾಗಿತ್ತು. ಈ ಪರಿಶೀಲನೆ ಹಾಗೂ ಕೆಎಸ್ಎನ್ಡಿಎಂಸಿ ಸಲ್ಲಿಸಿದ ಸಮಗ್ರ ವರದಿಯ ಆಧಾರದ ಮೇಲೆ ಇದೀಗ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.ಇವುಗಳಲ್ಲಿ 21 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.

ಸರ್ಕಾರದ ಆದೇಶ ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ ಆರು ತಿಂಗಳ ಅವಧಿಗೆ ಅನ್ವಯವಾಗಲಿದೆ.

ತೀವ್ರ ಬರಪೀಡಿತ ತಾಲೂಕುಗಳು:ತುಮಕೂರು ಜಿಲ್ಲೆಯ ತಿಪಟೂರು; ಕೊಪ್ಪಳ ಜಿಲ್ಲೆಯ ಕಾರಟಗಿ; ರಾಯಚೂರು ಜಿಲ್ಲೆಯ ಮಾನ್ವಿ, ಸಿಂಧನೂರು ಮತ್ತು ಸಿರವಾರ; ಕಲಬುರಗಿ ಜಿಲ್ಲೆಯ ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ ಮತ್ತು ಶಹಾಬಾದ್; ಬೀದರ್ ಜಿಲ್ಲೆಯ ಭಾಲ್ಕಿ; ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಬಬಲೇಶ್ವರ ಮತ್ತು ತಿಕೋಟಾ; ಹಾವೇರಿ

ಜಿಲ್ಲೆಯ ರಟ್ಟೀಹಳ್ಳಿ; ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ ಮತ್ತು ಅಣ್ಣಿಗೇರಿ; ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕುಗಳು.

ಸಾಧಾರಣ ಬರಪೀಡಿತ ತಾಲೂಕುಗಳು:ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವೀರಾಜಪೇಟೆ.

ಪರಿಹಾರ ಕ್ರಮಕ್ಕೆ ಸೂಚನೆಬರಪೀಡಿತ ಎಂದು ಘೋಷಿಸಲಾದ ತಾಲೂಕುಗಳಲ್ಲಿ ರಾಜ್ಯ ವಿಪತ್ತು ಸ್ಪಂದನಾ ನಿಧಿ ಮಾರ್ಗಸೂಚಿಗಳಂತೆ ಅಗತ್ಯ ಪರಿಹಾರ ಹಾಗೂ ಸ್ಪಂದನಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.

ಕೃಷಿ ಆಯುಕ್ತರು, ತೋಟಗಾರಿಕೆ ನಿರ್ದೇಶಕರು ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಜಂಟಿಯಾಗಿ ಬೆಳೆ ಹಾನಿ ಸಮೀಕ್ಷೆ ನಡೆಸಿ, ಪರಿಹಾರಕ್ಕೆ ಸಂಬಂಧಿಸಿದ ವರದಿಯನ್ನು ತಕ್ಷಣ ಸರ್ಕಾರಕ್ಕೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಮುಂದುವರಿಯುವ ಬರ ಪರಿಸ್ಥಿತಿ: ಸೆಪ್ಟೆಂಬರ್ ನಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಕೆಎಸ್ಎನ್ಡಿಎಂಸಿ ವಾರಕ್ಕೊಮ್ಮೆ ಬರ ಪರಿಸ್ಥಿತಿಯನ್ನು ಪರಿಶೀಲಿಸಲಿದೆ.

ಮುಂದಿನ ದಿನಗಳಲ್ಲಿ ತಾಲೂಕುಗಳ ಅರ್ಹತೆಯನ್ನು ಆಧರಿಸಿ ಹೆಚ್ಚುವರಿ ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande