
ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನಗರದ ಇಂದಿರಾ ಕ್ಯಾಂಟೀನ್ಗಳ ಆವರಣದಲ್ಲೇ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಳಿಗೆಗಳನ್ನು ಸ್ಥಾಪಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಪ್ರಸ್ತಾವನೆ ರೂಪಿಸಿದೆ.
ನಗರದ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಒಟ್ಟು 79 ಇಂದಿರಾ ಕ್ಯಾಂಟೀನ್ಗಳ ಆವರಣದಲ್ಲಿ ತಲಾ 100 ಚದರ ಅಡಿ ಜಾಗವನ್ನು ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ನಿಯಮಿತ (ಬಮುಲ್)ಗೆ ನಂದಿನಿ ಔಟ್ಲೆಟ್ಗಳಿಗಾಗಿ ನೀಡಲು ಗುರುತಿಸಲಾಗಿದೆ. ಈ ಜಾಗವನ್ನು ಐದು ವರ್ಷಗಳ ಗುತ್ತಿಗೆ ಅವಧಿಗೆ ನೀಡುವ ಉದ್ದೇಶವಿದೆ.
ಬಮುಲ್ ಮನವಿಯ ಮೇರೆಗೆ ನಗರದ ವಿವಿಧೆಡೆ 114 ಖಾಲಿ ನಿವೇಶನಗಳನ್ನೂ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇಂದಿರಾ ಕ್ಯಾಂಟೀನ್ಗಳ ಆವರಣದಲ್ಲಿ ನಂದಿನಿ ಮಳಿಗೆ ಸ್ಥಾಪನೆಗೆ ನೀಡುವ ಜಾಗಕ್ಕೆ ಸ್ಥಳದ ಮಾರ್ಗದರ್ಶಿ ಮೌಲ್ಯ ಆಧರಿಸಿ ಮಾಸಿಕ ಬಾಡಿಗೆ ನಿಗದಿಪಡಿಸಲು ಉದ್ದೇಶಿಸಲಾಗಿದೆ.
ಉದಾಹರಣೆಗೆ, ಅಶೋಕನಗರದ ಇಂದಿರಾ ಕ್ಯಾಂಟೀನ್ನಲ್ಲಿ 100 ಚದರ ಅಡಿ ಜಾಗಕ್ಕೆ ತಿಂಗಳಿಗೆ ₹1,965, ಹಲಸೂರು ಗೇಟ್ ಪೊಲೀಸ್ ಠಾಣೆ ಸಮೀಪದ ಜಾಗಕ್ಕೆ ಇದೇ ವಿಸ್ತೀರ್ಣಕ್ಕೆ ₹7,031 ಬಾಡಿಗೆ ನಿಗದಿಪಡಿಸುವ ಪ್ರಸ್ತಾವನೆ ಇದೆ.
ನಗರದ ಕೇಂದ್ರ ಭಾಗದ ವ್ಯಾಪ್ತಿಯಲ್ಲಿ 18 ಇಂದಿರಾ ಕ್ಯಾಂಟೀನ್ಗಳ ಆವರಣ ಹಾಗೂ ಎರಡು ಖಾಲಿ ನಿವೇಶನಗಳನ್ನು ಗುರುತಿಸಲಾಗಿದೆ.
ಊಟದ ಜಾಗ ಕಡಿಮೆಯಾಗುವ ಆತಂಕನಂದಿನಿ ಉತ್ಪನ್ನಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲು ಈ ಕ್ರಮ ನೆರವಾಗಬಹುದು. ಆದರೆ, ಇಂದಿರಾ ಕ್ಯಾಂಟೀನ್ಗಳ ಆವರಣದಲ್ಲೇ ಮಳಿಗೆಗಳನ್ನು ಸ್ಥಾಪಿಸುವುದರಿಂದ ಗ್ರಾಹಕರು ಊಟ ಮಾಡಲು ಲಭ್ಯವಿರುವ ಜಾಗ ಕಡಿಮೆಯಾಗುವ ಸಾಧ್ಯತೆ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಇಂದಿರಾ ಕ್ಯಾಂಟೀನ್ಗಳು ಮುಖ್ಯವಾಗಿ ಕಡಿಮೆ ದರದಲ್ಲಿ ಊಟ ಪಡೆಯುವ ಜನರಿಗೆ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ, ನಂದಿನಿ ಮಳಿಗೆಗಳಿಗೆ ಜಾಗ ನೀಡುವಾಗ ಕ್ಯಾಂಟೀನ್ಗಳ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಐದು ವರ್ಷಕ್ಕೆ ಮಾತ್ರ ಗುತ್ತಿಗೆಆರಂಭದಲ್ಲಿ ಬಮುಲ್ಗೆ 15 ವರ್ಷಗಳ ಗುತ್ತಿಗೆ ನೀಡುವ ಪ್ರಸ್ತಾವನೆ ಇತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಪರಿಶೀಲನೆ ಬಳಿಕ ಬಿಬಿಎಂಪಿ ಆಸ್ತಿ ನಿರ್ವಹಣಾ ನಿಯಮಗಳು–2024ರ ಅನ್ವಯ ಗುತ್ತಿಗೆ ಅವಧಿಯನ್ನು ಗರಿಷ್ಠ ಐದು ವರ್ಷಗಳಿಗೆ ಸೀಮಿತಗೊಳಿಸುವಂತೆ ಸೂಚಿಸಿದೆ.
ಇಂದಿರಾ ಕ್ಯಾಂಟೀನ್ಗಳ ಆವರಣದಲ್ಲಿ ನಂದಿನಿ ಔಟ್ಲೆಟ್ ಸ್ಥಾಪಿಸುವ ಪ್ರಸ್ತಾವನೆ 2025ರ ಜುಲೈನಲ್ಲೇ ಚರ್ಚೆಗೆ ಬಂದಿತ್ತು. ನಂತರ ಬಮುಲ್ ಗುರುತಿಸಿದ್ದ ಸ್ಥಳಗಳನ್ನು ಅಧಿಕಾರಿಗಳು ಪರಿಶೀಲಿಸಿ, ಲಭ್ಯವಿರುವ ಜಾಗದ ಅಳತೆ ಹಾಗೂ ಸೈಟ್ ಮ್ಯಾಪ್ಗಳನ್ನು ಸಿದ್ಧಪಡಿಸಿದ್ದಾರೆ.
“ಸಾರ್ವಜನಿಕ ಸ್ಥಳಗಳನ್ನು ಪರಿಣಾಮಕಾರಿಯಾಗಿ ಬಳಸುವ ಉದ್ದೇಶದಿಂದ ಈ ಪ್ರಸ್ತಾವನೆ ರೂಪಿಸಲಾಗಿದೆ. ಗುರುತಿಸಲಾದ ಸ್ಥಳಗಳಲ್ಲಿ ನಂದಿನಿ ಔಟ್ಲೆಟ್ಗಳ ಹಂಚಿಕೆ ಕುರಿತು ಬಮುಲ್ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಜಿಬಿಎ ಅಧಿಕಾರಿ ತಿಳಿಸಿದ್ದಾರೆ.---------------
ಹಿಂದೂಸ್ತಾನ್ ಸಮಾಚಾರ್ / BHARGAVI G R