ಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ
ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ವಿಶ್ವಕರ್ಮ ಸಮಾಜ ಕರಕುಶಲತೆ ಮತ್ತು ಶಿಲ್ಪಕಲೆಗೆ ಜಗತ್ಪ್ರಸಿದ್ಧಿ ಪಡೆದಿದೆ. ಸಾಂಪ್ರದಾಯಿಕ ಕಸುಬಿನ ಜೊತೆಗೆ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಡಾ.ಬಾಬು ಜಗಜೀವನರಾಮಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್
ಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ


ಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ


ಕರಕುಶಲತೆಯ ಜೊತೆ ಶಿಕ್ಷಣವೂ ಅನಿವಾರ್ಯ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ


ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ವಿಶ್ವಕರ್ಮ ಸಮಾಜ ಕರಕುಶಲತೆ ಮತ್ತು ಶಿಲ್ಪಕಲೆಗೆ ಜಗತ್ಪ್ರಸಿದ್ಧಿ ಪಡೆದಿದೆ. ಸಾಂಪ್ರದಾಯಿಕ ಕಸುಬಿನ ಜೊತೆಗೆ ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಡಾ.ಬಾಬು ಜಗಜೀವನರಾಮಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎಚ್ಆರ್ ಗವಿಯಪ್ಪ ವೃತ್ತದ ಸಮೀಪದಲ್ಲಿ ಈ ಹಿಂದೆ ಸೂಕ್ತ ನಿರ್ವಹಣೆಯಿಲ್ಲದೆ ಸೊರಗಿದ್ದ ವೃತ್ತಕ್ಕೆ ನಗರ ಶಾಸಕರು, ಮಹಾನಗರ ಪಾಲಿಕೆಯ ಮೇಯರ್ ಮುತುವರ್ಜಿಯಿಂದ ‘ವಿಶ್ವಕರ್ಮ ವೃತ್ತ’ ಎಂದು ನಾಮಕರಣ ಮಾಡಲಾಗಿದೆ. ಈ ವೃತ್ತದಲ್ಲಿ ಹುಲ್ಲುಹಾಸು ಹಾಗೂ ಹಸಿರೀಕರಣಗೊಳಿಸಿ ಸುಂದರಗೊಳಿಸಬೇಕು. ಅಮರಶಿಲ್ಪಿ ಜಕಣಾಚಾರ್ಯರ ಆಕರ್ಷಕ ಪ್ರತಿಮೆ ಸ್ಥಾಪಿಸುವ ಗುರಿ ಸಮುದಾಯ ಹೊಂದಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಜಗತ್ತಿಗೆ ದೇವರ ಪ್ರತಿರೂಪವನ್ನು ಸೃಷ್ಟಿಸಿಕೊಡುವ ವಿಶ್ವಕರ್ಮ ಸಮುದಾಯ ಪರಮ ಪುಣ್ಯವಂತ ಸಮಾಜ. ಸಮಾಜದಲ್ಲಿ ಪ್ರತಿಯೊಂದು ಸಣ್ಣ ಸಮುದಾಯವೂ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಒಗ್ಗಟ್ಟಾದಾಗ ಮಾತ್ರ ಸರ್ಕಾರದಿಂದ ನ್ಯಾಯ ಹಾಗೂ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಪಂಚದಲ್ಲಿ ಪ್ರತಿಯೊಬ್ಬರೂ ದೇವರಿಗೆ ಕೈಮುಗಿದು ವರ ಬೇಡುತ್ತಾರೆ. ಆದರೆ, ಭಕ್ತರು ಪೂಜಿಸುವ ಅಂತಹ ದೇವತೆಯ ವಿಗ್ರಹಗಳನ್ನೇ ಕೈಯಾರೆ ಸೃಷ್ಟಿಸುವ ಕಲೆಯು ಶಿಲ್ಪಿ ಸಮುದಾಯಕ್ಕೆ ಭಗವಂತ ಕರುಣಿಸಿದ ದೊಡ್ಡ ವರವಾಗಿದೆ. ಸಮುದಾಯದ ಯಾವುದೇ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ಮಟ್ಟದಲ್ಲಿ ಸದಾ ಬೆಂಬಲವಾಗಿ ನಿಲ್ಲುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ನ್ಯಾಯವಾದಿಗಳಾದ ತ್ರಿವೇಣಿ ಪಿ. ಪತ್ತಾರ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ದೇಶದ ಕಲೆ, ವಾಸ್ತುಶಿಲ್ಪ ಹಾಗೂ ಸಾಂಸ್ಕೃತಿಕ ಪರಂಪರೆಗೆ ವಿಶ್ವಕರ್ಮ ಸಮುದಾಯ ನೀಡಿರುವ ಕೊಡುಗೆ ಅನನ್ಯ. ವಿಶ್ವಕರ್ಮ ಪರಂಪರೆಯು ಕೇವಲ ಒಂದು ನಿರ್ದಿಷ್ಟ ಮತ ಅಥವಾ ಜಾತಿಯ ಚೌಕಟ್ಟಿಗೆ ಸೀಮಿತವಾಗಿರದೆ, ಅದು ಸಮಸ್ತ ಜಗತ್ತಿನ ಸೃಷ್ಟಿಯ ಆದಿ ಪರಂಪರೆಯಾಗಿದೆ. ಋಗ್ವೇದದ ವಿಶ್ವಕರ್ಮ ಸೂಕ್ತ, ಉಪನಿಷತ್ತುಗಳು ಹಾಗೂ ಪುರಾಣಗಳಲ್ಲಿ ವಿಶ್ವಕರ್ಮನ ಮಹಿಮೆಯನ್ನು ಕೊಂಡಾಡಲಾಗಿದೆ ಎಂದು ಹೇಳಿದರು.

‘ಹೊಸ ಚಿಗುರು ಹಳೆ ಬೇರು’ ಕೂಡಿರಬೇಕೆಂಬಂತೆ, ಸಮಾಜದ ಹಿರಿಯರು ಮತ್ತು ಕಿರಿಯರು ಒಗ್ಗೂಡಿ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಾಗಿದೆ. ದೇಶಾದ್ಯಂತ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಶ್ರಮಿಸುವ ಕುಶಲಕರ್ಮಿಗಳು ಈ ದಿನ ಭಗವಾನ್ ವಿಶ್ವಕರ್ಮನನ್ನು ಭಕ್ತಿಭಾವದಿಂದ ಆರಾಧಿಸುತ್ತಿದ್ದಾರೆ. ಕಲೆ ಮತ್ತು ವಾಸ್ತುಶಿಲ್ಪದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಮುದಾಯದ ಹೆಗ್ಗಳಿಕೆ ಅಪಾರ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿಯ ಅನ್ನಪೂರ್ಣ ತಂಡ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಇದಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಮೂರ್ತಿ ಶಿಲ್ಪಿಕಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಬಳ್ಳಾರಿ ಜಿಲ್ಲಾ ವಿಶ್ವಕರ್ಮ ವಿಕಾಸ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ಸ.ಸೋನಾರ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಸಮುದಾಯದ ಮುಖಂಡರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.

*ಅದ್ದೂರಿ ಮೆರವಣಿಗೆ:*

ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ವಿವಿಧ ಸಾಂಸ್ಕೃತಿಕ ಕಲಾತಂಡಗಳು ಭಾಗವಹಿಸಿ ಮೆರವಣಿಗೆಗೆ ಮೆರಗು ನೀಡಿದವು. ಮೆರವಣಿಗೆಯು ನಗರದ ಕಾಳಿಕಾ ಕಮಠೇಶ್ವರ ದೇವಸ್ಥಾನದಿಂದ ಆರಂಭವಾಗಿ ಬೆಂಗಳೂರು ರಸ್ತೆ- ಹಳೇ ಬ್ರೂಸ್ಪೇಟೆ ಪೊಲೀಸ್ ಠಾಣೆ- ತೇರು ಬೀದಿ- ಹೆಚ್ಆರ್ ಗವಿಯಪ್ಪ ವೃತ್ತದ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ವೇದಿಕೆಗೆ ತಲುಪಿ ಅಂತ್ಯಗೊಂಡಿತು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande