ಬೆಂಗಳೂರಲ್ಲಿ ಪತ್ನಿ ಮೇಲೆ ಆಸಿಡ್ ದಾಳಿ; ಮಚ್ಚಿನಿಂದ ಹಲ್ಲೆ, ಆರೋಪಿ ಪತಿ ಪೊಲೀಸರ ವಶಕ್ಕೆ
ಮಚ್ಚಿನಿಂದ ಹಲ್ಲೆ, ಆರೋಪಿ ಪತಿ ಪೊಲೀಸರ ವಶಕ್ಕೆ
ಬೆಂಗಳೂರಲ್ಲಿ ಪತ್ನಿ ಮೇಲೆ ಆಸಿಡ್ ದಾಳಿ; ಮಚ್ಚಿನಿಂದ ಹಲ್ಲೆ, ಆರೋಪಿ ಪತಿ ಪೊಲೀಸರ ವಶಕ್ಕೆ


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ರಾಜಧಾನಿ ಬೆಂಗಳೂರಿನ ಜೆ.ಪಿ.ನಗರ 3ನೇ ಹಂತದಲ್ಲಿ ಹಾಡಹಗಲೇ ಪತಿಯೊಬ್ಬ ತನ್ನ ಪತ್ನಿಯ ಮೇಲೆ ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ಘಟನೆಯಲ್ಲಿ 26 ವರ್ಷದ ಮಧುಮಿತ ಎಂಬ ನರ್ಸ್ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಧುಮಿತ ಅವರು ಜೆ.ಪಿ.ನಗರದ ನಾರಾಯಣ ಕ್ಲಿನಿಕ್ನಲ್ಲಿ ಕಳೆದ ಒಂದೂವರೆ ವರ್ಷದಿಂದ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಬೆಳಿಗ್ಗೆ ಸುಮಾರು 9.15ರ ವೇಳೆಗೆ ತಿಂಡಿ ತಿನ್ನಲು ಕ್ಲಿನಿಕ್ನಿಂದ ಹೊರಬಂದಾಗ ಆರೋಪಿ ಪತಿ ವೆಂಕಟೇಶ್ ಬೈಕ್ನಲ್ಲಿ ಅಲ್ಲಿಗೆ ಬಂದಿದ್ದಾನೆ ಎನ್ನಲಾಗಿದೆ.

ಆರೋಪಿ ತನ್ನೊಂದಿಗೆ ಚಾಕು, ಮಚ್ಚು ಹಾಗೂ ಆಸಿಡ್ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮಧುಮಿತ ಅವರನ್ನು ಬೆನ್ನಟ್ಟಿದ ಆತ, ಕ್ಲಿನಿಕ್ನ ಪಾರ್ಕಿಂಗ್ ಪ್ರದೇಶದಲ್ಲಿ ಮಚ್ಚಿನಿಂದ ಹಲ್ಲೆ ನಡೆಸಿ ಬಳಿಕ ಆಸಿಡ್ ಎರಚಿದ್ದಾನೆ ಎನ್ನಲಾಗಿದೆ. ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಸ್ಥಳೀಯರು ರಕ್ಷಣೆಗೆ ಮುಂದಾಗಿದ್ದಾರೆ.

ಆರೋಪಿಯನ್ನು ತಡೆಯಲು ಸ್ಥಳೀಯರು ಮುಂದಾದಾಗ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಪರಾರಿಯಾಗಲು ಯತ್ನಿಸಿದ ವೆಂಕಟೇಶ್ನನ್ನು ಸಮೀಪದಲ್ಲಿದ್ದ ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಜೆ.ಪಿ.ನಗರ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ದಾಳಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ದಂಪತಿಯ ಕೌಟುಂಬಿಕ ಹಿನ್ನೆಲೆ ಹಾಗೂ ದಾಳಿಯ ಉದ್ದೇಶದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಧುಮಿತ ಅವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆಯ ದೃಶ್ಯಗಳು ಸ್ಥಳೀಯರು ದಾಖಲಿಸಿದ ವಿಡಿಯೊದಲ್ಲಿ ಸೆರೆಯಾಗಿವೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande