ಮಳೆ ಪರಿಣಾಮ: ಬೆಂಗಳೂರಿನಲ್ಲಿ ವಾಯು ಗುಣಮಟ್ಟ ‘ಸಾಧಾರಣ’ ಮಟ್ಟಕ್ಕೆ
ವಾಯು ಗುಣಮಟ್ಟ ‘ಸಾಧಾರಣ’ ಮಟ್ಟಕ್ಕೆ
ಮಳೆ ಪರಿಣಾಮ: ಬೆಂಗಳೂರಿನಲ್ಲಿ ವಾಯು ಗುಣಮಟ್ಟ ‘ಸಾಧಾರಣ’ ಮಟ್ಟಕ್ಕೆ


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಮುಂಗಾರು ಮಳೆಯ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ನಿಯಂತ್ರಣದಲ್ಲಿದ್ದು, ವಾಯು ಗುಣಮಟ್ಟ ಸೂಚ್ಯಂಕ ‘ಉತ್ತಮ’ದಿಂದ ‘ಸಾಧಾರಣ’ ಮಟ್ಟದಲ್ಲಿ ದಾಖಲಾಗಿದೆ.

ಬೆಂಗಳೂರಿನಲ್ಲಿ ಇಂದು ಎಕ್ಯೂಐ ಸುಮಾರು 55ರಿಂದ 80ರ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ‘ಸಾಧಾರಣ’ ವರ್ಗದಲ್ಲಿದೆ. ರೇಷ್ಮೆ ಮಂಡಳಿ, ಜಯನಗರ ಹಾಗೂ ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ವಾಹನ ದಟ್ಟಣೆಯಿಂದ PM10 ಮತ್ತು PM2.5 ಕಣಗಳ ಪ್ರಮಾಣ ಕೊಂಚ ಹೆಚ್ಚಾಗಿದೆ ಎನ್ನಲಾಗಿದೆ. ಹೆಬ್ಬಾಳ ಹಾಗೂ ಸಿಟಿ ರೈಲ್ವೆ ನಿಲ್ದಾಣದ ಸುತ್ತಮುತ್ತ ವಾಯು ಗುಣಮಟ್ಟ ಉತ್ತಮವಾಗಿದೆ.

ರಾಜ್ಯದ ಇತರೆ ನಗರಗಳ ಪೈಕಿ ಮೈಸೂರಿನಲ್ಲಿ 35–45 ಹಾಗೂ ಮಂಗಳೂರಿನಲ್ಲಿ 28–38 AQI ದಾಖಲಾಗಿದ್ದು, ಉತ್ತಮ ವಾಯು ಗುಣಮಟ್ಟ ಕಂಡುಬಂದಿದೆ. ಹುಬ್ಬಳ್ಳಿ–ಧಾರವಾಡದಲ್ಲಿ 42–52 ಮತ್ತು ಬೆಳಗಾವಿಯಲ್ಲಿ 38–48ರಷ್ಟು AQI ದಾಖಲಾಗಿದೆ.ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂದುವರಿದ ಮಳೆಯು ವಾತಾವರಣದಲ್ಲಿನ ಧೂಳು ಹಾಗೂ ಮಾಲಿನ್ಯಕಾರಕ ಕಣಗಳ ಪ್ರಮಾಣ ಕಡಿಮೆಯಾಗಲು ನೆರವಾಗಿದೆ.

ಆರೋಗ್ಯದ ದೃಷ್ಟಿಯಿಂದ, ಸಾಮಾನ್ಯವಾಗಿ ಈ ಮಟ್ಟದ ವಾಯು ಗುಣಮಟ್ಟದಿಂದ ಹೆಚ್ಚಿನ ಜನರಿಗೆ ತೊಂದರೆ ಉಂಟಾಗುವ ಸಾಧ್ಯತೆ ಕಡಿಮೆ. ಆದರೆ ಸೂಕ್ಷ್ಮ ಆರೋಗ್ಯ ಸಮಸ್ಯೆ ಹೊಂದಿರುವವರು ಹೆಚ್ಚಿನ ವಾಹನ ದಟ್ಟಣೆ ಇರುವ ಪ್ರದೇಶಗಳಲ್ಲಿ ದೀರ್ಘಕಾಲ ಹೊರಗಡೆ ಇರುವುದನ್ನು ತಪ್ಪಿಸುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

“ಮುಂಗಾರು ಮಳೆಯ ಸಕ್ರಿಯತೆಯಿಂದಾಗಿ ವಾತಾವರಣದಲ್ಲಿನ ಧೂಳು ಮತ್ತು ಮಾಲಿನ್ಯಕಾರಕ ಕಣಗಳ ಪ್ರಮಾಣ ಕಡಿಮೆಯಾಗಿದ್ದು, ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ನಿಯಂತ್ರಣದಲ್ಲಿದೆ.

ಮುಂದಿನ ದಿನಗಳಲ್ಲಿ ಮಳೆ ಮುಂದುವರಿದರೆ ಮಾಲಿನ್ಯ ಪ್ರಮಾಣ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ” ಎಂದು ಪರಿಸರ ತಜ್ಞರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande