
ಕಠ್ಮಂಡು, 16 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ನೇಪಾಳದಲ್ಲಿ ಆ.26ರಂದು ಸಂಭವಿಸಿದ ಭೀಕರ ಪ್ರವಾಹದ 21ನೇ ದಿನವೂ ಶೋಧ, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇದುವರೆಗೆ 1,399 ಮಂದಿಯ ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ 5,179 ಮಂದಿ ನಾಪತ್ತೆಯಾಗಿದ್ದಾರೆ.
ಸುಮಾರು 21 ಸಾವಿರ ಭದ್ರತಾ ಸಿಬ್ಬಂದಿ ಶೋಧ, ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಲವಿದ್ಯುತ್ ಯೋಜನೆಗಳ ಸುರಂಗಗಳು, ನದಿ ದಡಗಳು, ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಹಾಗೂ ಪ್ರವಾಹದಿಂದ ಹಾನಿಗೊಳಗಾದ ಮನೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ನೇಪಾಳ ಸೇನೆಯ ವಕ್ತಾರ ರಾಜಾರಾಮ್ ಬಸ್ನೇತ್ ಅವರ ಪ್ರಕಾರ, ಸೇನೆಯ ಸುಮಾರು 8,900 ಯೋಧರು ನೇರವಾಗಿ ಶೋಧ, ರಕ್ಷಣಾ ಮತ್ತು ಸಮನ್ವಯ ಕಾರ್ಯಗಳಲ್ಲಿ ನಿಯೋಜಿತರಾಗಿದ್ದಾರೆ. ಸಶಸ್ತ್ರ ಪೊಲೀಸ್ ಪಡೆಯ ಸುಮಾರು 5,000 ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ರಕ್ಷಣಾ ಕಾರ್ಯದ ಜತೆಗೆ ಮಾನವರಹಿತ ವೈಮಾನಿಕ ಸಾಧನಗಳನ್ನೂ ಬಳಸಲಾಗುತ್ತಿದೆ. ನೇಪಾಳ ಪೊಲೀಸರ ಸುಮಾರು 8,000 ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಗಳಲ್ಲಿ ತೊಡಗಿದ್ದಾರೆ.
ಪ್ರವಾಹದಲ್ಲಿ ರಸುವಾ ಮತ್ತು ನುವಾಕೋಟ್‌ನ ನೇಪಾಳ ಪೊಲೀಸರ ಐದು ಕಚೇರಿಗಳೂ ಕೊಚ್ಚಿಹೋಗಿದ್ದು, ಅವುಗಳನ್ನು ಇನ್ನೂ ಸಂಪೂರ್ಣವಾಗಿ ಪುನರ್ ಸ್ಥಾಪಿಸಲು ಸಾಧ್ಯವಾಗಿಲ್ಲ.
ಸ್ಯಾಫ್ರುಬೇಸಿಯಲ್ಲಿ ಮೂರು ಸೇನಾ ತಂಡ ನಿಯೋಜನೆ
ರಸುವಾದ ಸ್ಯಾಫ್ರುಬೇಸಿ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಕ್ಕಾಗಿ ಸೇನೆಯ ಮೂರು ತಂಡಗಳನ್ನು ನಿಯೋಜಿಸಲಾಗಿದೆ. ಪ್ರವಾಹದಲ್ಲಿ ಸ್ಯಾಫ್ರುಬೇಸಿ ಮಾರುಕಟ್ಟೆಯ ದೊಡ್ಡ ಭಾಗ ಕೊಚ್ಚಿಹೋಗಿದ್ದು, ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಹಾನಿಗೊಳಗಾಗಿದೆ. ಇದರಿಂದ ಪರಿಹಾರ ಮತ್ತು ಶೋಧ ಕಾರ್ಯಾಚರಣೆಗೆ ವಿಳಂಬವಾಗಿದೆ.
ಸೇನೆಯ ಸಿಬ್ಬಂದಿ ಪ್ರವಾಹಪೀಡಿತ ಕಾಲೊನಿ, ತುಪ್ಚೆ, ದಾನ್ಸಿಂಗ್, ಸಾಮರಿ ಭಂಜ್ಯಾಂಗ್, ಕಾಲಿಕಾಸ್ಥಾನ್ ಮತ್ತು ಮಾನಚೇತ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಲ್ನಡಿಗೆಯಲ್ಲಿ ಗಸ್ತು ನಡೆಸುತ್ತಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಂಡಿರುವ ದುರ್ಗಮ ಪ್ರದೇಶಗಳಿಗೆ ಪರಿಹಾರ ಸಾಮಗ್ರಿ ತಲುಪಿಸಲು ಮಾನವರಹಿತ ವೈಮಾನಿಕ ಸಾಧನಗಳ ಬಳಕೆಯನ್ನೂ ಹೆಚ್ಚಿಸಲಾಗಿದೆ.
ನೇಪಾಳ ಸೇನೆಯ ಮಾನವರಹಿತ ವೈಮಾನಿಕ ಸಾಧನಗಳ ಮೂಲಕ ನುವಾಕೋಟ್‌ನಲ್ಲಿ 16,138 ಕಿಲೋಗ್ರಾಂ ಹಾಗೂ ರಸುವಾದಲ್ಲಿ 5,861 ಕಿಲೋಗ್ರಾಂ ಪರಿಹಾರ ಮತ್ತು ಅಗತ್ಯ ಸಾಮಗ್ರಿಗಳನ್ನು ಈಗಾಗಲೇ ತಲುಪಿಸಲಾಗಿದೆ.
ಟಿಮುರೆಯಲ್ಲಿ ಭಾರಿ ಹಾನಿ
ಚೀನಾ ಗಡಿಗೆ ಹೊಂದಿಕೊಂಡಿರುವ ಪ್ರಮುಖ ವ್ಯಾಪಾರ ಮಾರುಕಟ್ಟೆ ಟಿಮುರೆ ಪ್ರವಾಹದಿಂದ ಭಾರಿ ಹಾನಿಗೊಳಗಾಗಿದೆ. ಸಶಸ್ತ್ರ ಪೊಲೀಸ್ ಪಡೆಯ ಗಡಿ ಕಾವಲು ಕೇಂದ್ರ ಹೊರತುಪಡಿಸಿ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳೂ ಕೊಚ್ಚಿಹೋಗಿವೆ. ಮೂರು ವಾರಗಳು ಕಳೆದರೂ ಸಶಸ್ತ್ರ ಪೊಲೀಸ್ ಪಡೆಯ ಹೊರತಾಗಿ ಇತರ ಸರ್ಕಾರಿ ಸಂಸ್ಥೆಗಳು ಅಲ್ಲಿಗೆ ಸಂಪೂರ್ಣವಾಗಿ ತಲುಪಲು ಸಾಧ್ಯವಾಗಿಲ್ಲ.
ಟಿಮುರೆ ಮಾರುಕಟ್ಟೆಯಿಂದ 100ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ ಪ್ರವಾಹದಿಂದ ಧ್ವಂಸಗೊಂಡ ಮನೆಗಳಲ್ಲಿ ಇನ್ನೂ ಉತ್ಖನನ ಕಾರ್ಯ ಆರಂಭವಾಗಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನೇಪಾಳ ಪೊಲೀಸರ ಉಪಸ್ಥಿತಿ ಇಲ್ಲದಿರುವುದರಿಂದ ಮೃತದೇಹಗಳ ಶೋಧ ಮತ್ತು ಹೊರತೆಗೆಯುವ ಕಾರ್ಯಕ್ಕೂ ಅಡ್ಡಿಯಾಗಿದೆ.
ಟಿಮುರೆಯ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಟಿಮುರೆಯಿಂದ ಸುಮಾರು ಎರಡು ಕಿಲೋಮೀಟರ್ ಮೇಲಿರುವ ರಸುವಾಗಢಿ ಗಡಿ ಕೇಂದ್ರಕ್ಕೆ ತೆರಳುವ ರಸ್ತೆಯೂ ಇಲ್ಲವಾಗಿದೆ. ಟಿಮುರೆಯಿಂದ ಸುಮಾರು 16 ಕಿಲೋಮೀಟರ್ ಕೆಳಗಿರುವ ಸ್ಯಾಫ್ರುಬೇಸಿಗೆ ಸಂಪರ್ಕ ಕಲ್ಪಿಸುವ ಮಾರ್ಗವೂ ಸಂಪೂರ್ಣ ಕೊಚ್ಚಿಹೋಗಿದೆ.
ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲೂ ಶೋಧ
ಚಿಲಿಮೆ ಮತ್ತು ಲಾಂಗ್‌ಟಾಂಗ್ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ವಿದೇಶಿ ತಾಂತ್ರಿಕ ತಜ್ಞರೊಂದಿಗೆ ಜಂಟಿ ರಕ್ಷಣಾ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಚಿಲಿಮೆ ಯೋಜನೆಯ ಸುರಂಗದಲ್ಲಿ ನೀರು ಹೊರಹೋಗುವ ಸ್ಥಳದಲ್ಲಿ ರಂಧ್ರ ನಿರ್ಮಿಸಿ ರಕ್ಷಣಾ ತಂಡವು ಸುಮಾರು 130 ಮೀಟರ್ ಒಳಗೆ ಪ್ರವೇಶಿಸಿದೆ. ಅವಶೇಷಗಳನ್ನು ತೆರವುಗೊಳಿಸಲು ಅಗೆಯುವ ಯಂತ್ರಗಳು ಮತ್ತು ಭಾರ ಎತ್ತುವ ಯಂತ್ರಗಳನ್ನು ಬಳಸಲಾಗುತ್ತಿದೆ.
ಮೇಲ್ದರ್ಜೆಯ ತ್ರಿಶೂಲಿ-1 ಯೋಜನೆಯ ‘ಆಡಿಟ್-3’ ಪ್ರದೇಶದಲ್ಲಿ ನೇಪಾಳ ಸೇನೆ ಮತ್ತು ಯೋಜನೆಯ ಪ್ರತಿನಿಧಿಗಳನ್ನು ಒಳಗೊಂಡ ರಕ್ಷಣಾ ತಂಡವು ಸುಮಾರು 600 ಮೀಟರ್ ಒಳಗೆ ಪ್ರವೇಶಿಸಿದೆ. ತ್ರಿಶೂಲಿ-3ಎ ಯೋಜನೆಯ ಸುರಂಗ ಹಾಗೂ ವಿದ್ಯುತ್‌ಗೃಹ ಪ್ರದೇಶದಲ್ಲಿಯೂ ಜಂಟಿ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ತ್ರಿಶೂಲಿ-3ಬಿ ಯೋಜನೆಯಲ್ಲಿ ನೇಪಾಳ ಸೇನೆ ಸೇರಿದಂತೆ ಜಂಟಿ ತಂಡವು ಅಗೆಯುವ ಯಂತ್ರಗಳು ಮತ್ತು ಭಾರ ಎತ್ತುವ ಯಂತ್ರಗಳ ನೆರವಿನಿಂದ ಅವಶೇಷಗಳನ್ನು ತೆರವುಗೊಳಿಸುತ್ತಿದೆ. ಯೋಜನೆಯ ವಸತಿ ಪ್ರದೇಶದಲ್ಲಿ ಎರಡು ವಸತಿ ಕಟ್ಟಡಗಳ ಅಡಿಪಾಯದ ಅವಶೇಷಗಳು ಮಾತ್ರ ಪತ್ತೆಯಾಗಿದ್ದು, ಇದುವರೆಗೆ ಬೇರೆ ಯಾವುದೇ ರಚನೆ ಪತ್ತೆಯಾಗಿಲ್ಲ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.