ದಾಳಿಂಬೆ ಹಣ್ಣಿನ ಉಡುಗೊರೆಯ ಹಿಂದಿನ ಕಥೆ: ಕಣ್ಣೀರಿನ ಹಾದಿಯಿಂದ ಸಂತಸದ ತೀರಕ್ಕೆ
ವಿಜಯಪುರ, 16 ಸೆಪ್ಟೆಂಬರ್ (ಹಿ.ಸ.) ಬರ, ಬಿಸಿಲು, ನೀರಿನ ಕೊರತೆ ಹಾಗೂ ಸಾಲದ ಸಂಕಷ್ಟದಿಂದ ಕಣ್ಣೀರಿಟ್ಟಿದ್ದ ರೈತ ಕುಟುಂಬವೊಂದು ಇಂದು ನೀರಾವರಿ ಸೌಲಭ್ಯ, ಕೃಷಿ ಶ್ರಮ ಹಾಗೂ ತೋಟಗಾರಿಕೆಯ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಮನಮುಟ್ಟುವ ಕಥೆ ಇದಾಗಿದೆ. ಮುಳವಾಡದ ಕಲ್ಲು-ಮಣ್ಣಿನ ಗುಡ್ಡಗಳು ಒಂದು
ಯಶಸ್ಸು ಬೆಲೆ


ವಿಜಯಪುರ, 16 ಸೆಪ್ಟೆಂಬರ್ (ಹಿ.ಸ.)

ಬರ, ಬಿಸಿಲು, ನೀರಿನ ಕೊರತೆ ಹಾಗೂ ಸಾಲದ ಸಂಕಷ್ಟದಿಂದ ಕಣ್ಣೀರಿಟ್ಟಿದ್ದ ರೈತ ಕುಟುಂಬವೊಂದು ಇಂದು ನೀರಾವರಿ ಸೌಲಭ್ಯ, ಕೃಷಿ ಶ್ರಮ ಹಾಗೂ ತೋಟಗಾರಿಕೆಯ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಮನಮುಟ್ಟುವ ಕಥೆ ಇದಾಗಿದೆ.

ಮುಳವಾಡದ ಕಲ್ಲು-ಮಣ್ಣಿನ ಗುಡ್ಡಗಳು ಒಂದು ಕಾಲದಲ್ಲಿ ಕೃಷಿಗೆ ಅಷ್ಟಾಗಿ ಪೂರಕವಾಗಿರಲಿಲ್ಲ. 65 ಎಕರೆ ಜಮೀನು ಹೊಂದಿದ್ದರೂ ನೀರಿನ ಕೊರತೆಯಿಂದಾಗಿ ಶಿವು ಜಾಧವ್ ಅವರ ಕುಟುಂಬಕ್ಕೆ ಸ್ವಂತ ಜಮೀನಿದ್ದರೂ ಅದರಿಂದ ನಿರೀಕ್ಷಿತ ಆದಾಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಬರ ಹಾಗೂ ಬಿಸಿಲಿನ ತೀವ್ರತೆಯಿಂದ ಕೃಷಿ ಸಂಪೂರ್ಣವಾಗಿ ಸಂಕಷ್ಟಕ್ಕೆ ಸಿಲುಕಿತ್ತು. ಮನೆ ನಿರ್ವಹಣೆಯೇ ಕುಟುಂಬಕ್ಕೆ ದೊಡ್ಡ ಸವಾಲಾಗಿತ್ತು.

ಬರಗಾಲದ ಪರಿಣಾಮವಾಗಿ ಕುಟುಂಬದ ಪಾಂಡು ಮತ್ತು ಖೇಮು ಅವರು ಮಹಾರಾಷ್ಟ್ರಕ್ಕೆ ಕೂಲಿ ಕಾರ್ಮಿಕರನ್ನು ಕಳುಹಿಸುವ ಗುತ್ತಿಗೆದಾರರಾಗಿ ದುಡಿಯುವ ಪರಿಸ್ಥಿತಿಯೂ ಎದುರಾಗಿತ್ತು. ಬದುಕಿನ ಬಂಡಿ ಸಾಗಿಸಲು ಕುಟುಂಬಸ್ಥರು ಹಲವು ರೀತಿಯಲ್ಲಿ ಹೋರಾಟ ನಡೆಸಬೇಕಾಯಿತು.

ಇದರ ನಡುವೆ ಹಿರಿಯ ಮಗ ಪಾಂಡು ಜಾಧವ್ ಅವರಿಗೆ ಬ್ರೇನ್ ಟ್ಯೂಮರ್ ಕಾಣಿಸಿಕೊಂಡಿದ್ದು, ಆಸ್ಪತ್ರೆ ಚಿಕಿತ್ಸೆ ಸೇರಿದಂತೆ ಕುಟುಂಬದ ಮೇಲೆ ಕೋಟಿಗೂ ಅಧಿಕ ರೂಪಾಯಿ ಸಾಲದ ಹೊರೆ ಬಿದ್ದಿತು.

ಅನಿವಾರ್ಯ ಪರಿಸ್ಥಿತಿಯಲ್ಲಿ ಪಿತ್ರಾರ್ಜಿತ ಆಸ್ತಿಯ 6 ಎಕರೆ ಜಮೀನನ್ನೇ ಮಾರಾಟ ಮಾಡಬೇಕಾದ ದುಸ್ಥಿತಿ ಎದುರಾಯಿತು. ಸ್ವಂತ ಜಮೀನನ್ನು ಮಾರಬೇಕಾದ ನೋವು ಕುಟುಂಬವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿತ್ತು.

ಆದರೆ ಕತ್ತಲೆಯ ನಂತರ ಬೆಳಕು ಮೂಡುವಂತೆ, ನೀರಾವರಿ ಯೋಜನೆಗಳ ಜಾರಿಯಿಂದ ಈ ಕುಟುಂಬದ ಬದುಕಿನ ದಿಕ್ಕು ಕ್ರಮೇಣ ಬದಲಾಗತೊಡಗಿತು. ನೀರು ದೊರೆಯುತ್ತಿದ್ದಂತೆ ಬರಡು ಭೂಮಿಯಲ್ಲಿ ಕೃಷಿಗೆ ಹೊಸ ಚೈತನ್ಯ ಮೂಡಿತು. ಅಣ್ಣ-ತಮ್ಮಂದಿರು ತಮ್ಮ ಶ್ರಮ, ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ ಕಲ್ಲು-ಮಣ್ಣಿನ ಗುಡ್ಡಗಳನ್ನು ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದರು.

ಬರಡು ಭೂಮಿಯನ್ನು ಬಂಗಾರದ ಭೂಮಿಯನ್ನಾಗಿ ಮಾಡಬೇಕೆಂಬ ಸಂಕಲ್ಪದೊಂದಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಂಡ ಅವರು, ಇಂದು ತಮ್ಮ ಪರಿಶ್ರಮದ ಫಲವನ್ನು ಕಾಣುತ್ತಿದ್ದಾರೆ. ಪ್ರಸ್ತುತ 15 ಎಕರೆ ಪ್ರದೇಶದಲ್ಲಿ ದ್ರಾಕ್ಷಿ, 15 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳ ಹಾಗೂ 5 ಎಕರೆ ಪ್ರದೇಶದಲ್ಲಿ ದಾಳಿಂಬೆ ಸಮೃದ್ಧವಾಗಿ ಬೆಳೆದು ನಿಂತಿವೆ.

ಈ ಬದಲಾವಣೆಯ ಪ್ರತೀಕವಾಗಿ ಗಣೇಶ ಹಬ್ಬದ ದಿನ ಪಾಂಡು ಜಾಧವ್ ಹಾಗೂ ಅವರ ಕುಟುಂಬದವರು ವಿಜಯಪುರದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ನಿವಾಸಕ್ಕೆ ಭೇಟಿ ನೀಡಿ, ತಮ್ಮ ತೋಟದಲ್ಲಿ ಬೆಳೆದ ದಾಳಿಂಬೆ ಹಣ್ಣುಗಳಿಂದ ತುಂಬಿದ ಬುಟ್ಟಿಯನ್ನು ಕೃತಜ್ಞತೆಯ ಸಂಕೇತವಾಗಿ ಉಡುಗೊರೆಯಾಗಿ ನೀಡಿದರು ಎಂದು ಎಂ.ಬಿ. ಪಾಟೀಲ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕುಟುಂಬದ ಹಿಂದಿನ ದಿನಗಳನ್ನು ನೆನಪಿಸಿಕೊಂಡ ಪಾಂಡು ಜಾಧವ್ ಹಾಗೂ ಕುಟುಂಬಸ್ಥರು ಭಾವುಕರಾದರು. ಒಂದು ಕಾಲದಲ್ಲಿ ನೀರಿನ ಕೊರತೆ, ಸಾಲ ಹಾಗೂ ಅನಾರೋಗ್ಯದಿಂದಾಗಿ

ಸಂಕಷ್ಟವನ್ನು ವಿವರಿಸಿದ ಅವರು, ಇಂದು ತಮ್ಮ ಶ್ರಮದಿಂದ ಬದುಕಿನಲ್ಲಿ ಕಂಡಿರುವ ಬದಲಾವಣೆಯ ಕುರಿತು ಸಂತಸ ವ್ಯಕ್ತಪಡಿಸಿದರು.

ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬೇಕಾದ ನೋವನ್ನು ಮರೆಯುವಂತೆ, ಇದೀಗ ತಮ್ಮ ಸ್ವಂತ ಗ್ರಾಮದಲ್ಲಿ 5 ಎಕರೆ ಹಾಗೂ ವಿಜಯಪುರದ ಸಮೀಪ 3 ಎಕರೆ ಜಮೀನು ಖರೀದಿಸಿರುವುದಾಗಿ ಅವರು ತಿಳಿಸಿದರು. ಅಲ್ಲದೆ ತೋಟದಲ್ಲಿಯೇ ಸುಸಜ್ಜಿತ ಮನೆ ನಿರ್ಮಿಸಿಕೊಂಡಿದ್ದು, ವಿಜಯಪುರದಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ಮನೆ ಖರೀದಿಸಿರುವುದಾಗಿಯೂ ಹೇಳಿದರು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದಾಗಿ ಹೆಮ್ಮೆಯಿಂದ ಹಂಚಿಕೊಂಡರು.

ಒಂದು ಕಾಲದಲ್ಲಿ ಬರದ ಬೇಗೆಯಲ್ಲಿ ಬಿರುಕು ಬಿಟ್ಟಿದ್ದ ಭೂಮಿ, ಇಂದು ದ್ರಾಕ್ಷಿ, ದಾಳಿಂಬೆ ಹಾಗೂ ಮೆಕ್ಕೆಜೋಳದ ಹಸಿರಿನಿಂದ ಕಂಗೊಳಿಸುತ್ತಿದೆ. ನೀರಾವರಿ ಸೌಲಭ್ಯ, ರೈತರ ಪರಿಶ್ರಮ ಮತ್ತು ಕೃಷಿಯ ಮೇಲಿನ ನಂಬಿಕೆ ಒಂದಾದಾಗ ಬರಡು ಭೂಮಿಯಲ್ಲೂ ಸಮೃದ್ಧಿ ಸಾಧ್ಯ ಎಂಬುದಕ್ಕೆ ಜಾಧವ್ ಕುಟುಂಬದ ಬದುಕಿನ ಬದಲಾವಣೆ ಉದಾಹರಣೆಯಾಗಿದೆ.

ದಾಳಿಂಬೆ ಹಣ್ಣಿನ ಬುಟ್ಟಿಯ ರೂಪದಲ್ಲಿ ಕುಟುಂಬ ನೀಡಿದ ಉಡುಗೊರೆ ಕೇವಲ ಹಣ್ಣಿನ ಉಡುಗೊರೆಯಾಗಿರಲಿಲ್ಲ. ಅದು ಸಂಕಷ್ಟದ ದಿನಗಳಲ್ಲಿ ಕಂಡ ಕಣ್ಣೀರು, ಹೋರಾಟದ ಹೆಜ್ಜೆಗಳು, ನೀರಿಗಾಗಿ ಎದುರಿಸಿದ ನೋವು ಹಾಗೂ ಇಂದು ದೊರೆತಿರುವ ನೆಮ್ಮದಿ ಮತ್ತು ಸಂತಸದ ಪ್ರತೀಕವಾಗಿತ್ತು.

“ಕಣ್ಣೀರಿನ ಹಾದಿಯಿಂದ ಸಂತಸದ ತೀರಕ್ಕೆ” ತಲುಪಿರುವ ಪಾಂಡು ಜಾಧವ್ ಕುಟುಂಬದ ಈ ಪಯಣ, ಬರಪೀಡಿತ ಪ್ರದೇಶಗಳ ರೈತರಿಗೆ ಆತ್ಮವಿಶ್ವಾಸ ತುಂಬುವ ಕಥೆಯಾಗಿ ಹೊರಹೊಮ್ಮಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅವಕಾಶ ದೊರೆತರೆ ರೈತರು ತಮ್ಮ ಶ್ರಮದಿಂದ ಭೂಮಿಯನ್ನು ಸಮೃದ್ಧಿಯ ನೆಲೆಯನ್ನಾಗಿ ಪರಿವರ್ತಿಸಬಹುದು ಎಂಬ ಸಂದೇಶವನ್ನು ಈ ಕುಟುಂಬದ ಸಾಧನೆ ಸಾರುತ್ತದೆ ಎಂದು ಎಂ.ಬಿ. ಪಾಟೀಲ ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande