ವಾಯುಪಡೆ ಅಧಿಕಾರಿ ಸೋಗಿನಲ್ಲಿ ಉದ್ಯೋಗದ ಆಮಿಷ; ಚಿನ್ನದ ಸರ ಎಗರಿಸಿದ ವಂಚಕ
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನೊಬ್ಬನಿಂದ ಚಿನ್ನದ ಸರ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಾನು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಮೆಡಿಕಲ್ ಟೆಸ್ಟ್ ಹಾಗೂ ಭದ್ರತಾ ತಪ
ವಾಯುಪಡೆ ಅಧಿಕಾರಿ ಸೋಗಿನಲ್ಲಿ ಉದ್ಯೋಗದ ಆಮಿಷ; ಚಿನ್ನದ ಸರ ಎಗರಿಸಿದ ವಂಚಕ


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನೊಬ್ಬನಿಂದ ಚಿನ್ನದ ಸರ ದೋಚಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಾನು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಮೆಡಿಕಲ್ ಟೆಸ್ಟ್ ಹಾಗೂ ಭದ್ರತಾ ತಪಾಸಣೆ ನೆಪದಲ್ಲಿ ಚಿನ್ನದ ಸರ ಬಿಚ್ಚಿಸಿಕೊಂಡು ಪರಾರಿಯಾಗಿದ್ದಾನೆ.

ಪಟ್ಟೇಗಾರ್ ಪಾಳ್ಯದ 25 ವರ್ಷದ ಸುಜನ್ ಆರ್.ಕೆ. ವಂಚನೆಗೊಳಗಾದ ಯುವಕ. ‘ರಾವ್ ಪವಾರ್’ ಎಂಬಾತ ತಾನು ವಾಯುಪಡೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು, ವಾಯುಪಡೆಯಲ್ಲಿ ಉದ್ಯೋಗದ ಅವಕಾಶವಿದೆ ಎಂದು ಸುಜನ್ಗೆ ನಂಬಿಸಿದ್ದ ಎನ್ನಲಾಗಿದೆ. ಸಂಬಂಧಿಕರೊಬ್ಬರಿಂದ ಮಾಹಿತಿ ಪಡೆದಿದ್ದ ಸುಜನ್, ಆರೋಪಿಯನ್ನು ಸಂಪರ್ಕಿಸಿದ್ದರು.

ಭದ್ರತೆ ನೆಪದಲ್ಲಿ ಚಿನ್ನದ ಸರ ಪಡೆದಆರೋಪಿ ಸುಜನ್ನನ್ನು ಶೆಟ್ಟಿಹಳ್ಳಿ ಕ್ರಾಸ್ ಹಾಗೂ ಗಂಗಮ್ಮನಗುಡಿ ಬಳಿಯ ಕೆನರಾ ಬ್ಯಾಂಕ್ ಸಮೀಪ ಕರೆಸಿಕೊಂಡು ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದಿದ್ದಾನೆ. ಬಳಿಕ, “ವಾಯುಪಡೆ ಕ್ಯಾಂಪಸ್ಗೆ ಪ್ರವೇಶಿಸುವಾಗ ಯಾವುದೇ ಚಿನ್ನಾಭರಣ ಅಥವಾ ಲೋಹದ ವಸ್ತುಗಳನ್ನು ಧರಿಸಿರಬಾರದು. ಚಿನ್ನವನ್ನು ಬ್ಯಾಂಕ್ ಲಾಕರ್ನಲ್ಲಿ ಇಡಬೇಕು” ಎಂದು ಹೇಳಿ ಯುವಕನನ್ನು ನಂಬಿಸಿದ್ದಾನೆ.

ಇದನ್ನು ನಂಬಿದ ಸುಜನ್ ತನ್ನ ಕೊರಳಲ್ಲಿದ್ದ ಚಿನ್ನದ ಸರವನ್ನು ಬಿಚ್ಚಿ ಆರೋಪಿಗೆ ನೀಡಿದ್ದಾನೆ. ಸಂದರ್ಶನ ಮುಗಿದ ಬಳಿಕ ಸರವನ್ನು ವಾಪಸ್ ನೀಡುವುದಾಗಿ ಆರೋಪಿ ಹೇಳಿದ್ದ ಎನ್ನಲಾಗಿದೆ.

ಚಿನ್ನದ ಸರ ಪಡೆದುಕೊಂಡ ಬಳಿಕ ಆರೋಪಿಯು ಸುಜನ್ಗೆ ಆಧಾರ್ ಕಾರ್ಡ್ನ ಜೆರಾಕ್ಸ್ ಪ್ರತಿಯನ್ನು ತೆಗೆದುಕೊಂಡು ಬರುವಂತೆ ಸೂಚಿಸಿದ್ದಾನೆ.

ಜೆರಾಕ್ಸ್ ತರಲು ತೆರಳಿದ್ದ ಸುಜನ್ ವಾಪಸ್ ಬಂದಾಗ ಆರೋಪಿ ಸ್ಥಳದಲ್ಲಿರಲಿಲ್ಲ. ಮೊಬೈಲ್ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು.ತಾನು ವಂಚನೆಗೆ ಒಳಗಾಗಿರುವುದನ್ನು ಅರಿತ ಸುಜನ್ ಗಂಗಮ್ಮನಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 318ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯ ಗುರುತು ಹಾಗೂ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಉದ್ಯೋಗ ಕೊಡಿಸುವುದಾಗಿ ಪರಿಚಯಿಸಿಕೊಂಡು ಚಿನ್ನದ ಸರ ಪಡೆದು ವ್ಯಕ್ತಿಯೊಬ್ಬ ಪರಾರಿಯಾಗಿರುವ ಕುರಿತು ದೂರು ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ತನಿಖೆ ಮುಂದುವರಿದಿದೆ ಎಂದು ಪೋಲಿಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande